ಶಿಕ್ಷಕರ ನೇಮಕಾತಿ ಪ್ರಕರಣ: ಚೌತಲಗೆ ಮಧ್ಯಂತರ ಜಾಮೀನು
ನವದೆಹಲಿ: ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆಸಿ ಬಂಧಿತರಾಗಿದ್ದ ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಲ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ 6 ತಿಂಗಳ ಮಧ್ಯಂತರ ಜಾಮೀನು ಆದೇಶ ಹೊರಡಿಸಿದೆ.
75 ವರ್ಷದ ಓಂ ಪ್ರಕಾಶ್ ಚೌತಲ ಅವರ ಆರೋಗ್ಯ ಸರಿಯಿಲ್ಲ. ಅವರಿಗೆ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಪಡಿಸಬೇಕಾಗಿದೆ ಎಂದು ವೈದ್ಯರು ದೃಢಪಡಿಸಿರುವುದರಿಂದ ನ್ಯಾಯಾಲಯ ಚೌತಲ ಅವರಿಗೆ 6 ತಿಂಗಳ ಮಧ್ಯಂತರ ಜಾಮೀನು ನೀಡಿದೆ.
ನ್ಯಾಯಾಮೂರ್ತಿ ಸಿದ್ದಾರ್ಥ ಮ್ರಿದುಲ್ ಅವರು ಆದೇಶ ಹೊರಡಿಸಿದ್ದಾರೆ. ಚೌತಲ ಅವರು ತಮ್ಮ ಪಾಸ್ಪೋರ್ಟ್ನ್ನು ನ್ಯಾಯಲಯಕ್ಕೆ ಒಪ್ಪಿಸಬೇಕು ಹಾಗೂ ನ್ಯಾಯಾಲಯದ ಅನುಮತಿಯಿಲ್ಲದೆ ರಾಜ್ಯ ಬಿಟ್ಟು ಹೋಗುವಂತಿಲ್ಲ ಎಂದು ಸೂಚಿಸಿದ್ದಾರೆ.
ಜಾಮೀನಿನ ಮೇಲೆ ಬಿಡುಗಡೆಯಾದ 24 ಗಂಟಯೊಳಗಾಗಿ ಚೌತಲ ಅವರೇ ಮೆದಂತಾ ಮೆಡಿಸಿಟಿ ಆಸ್ಪತ್ರೆಗೆ ದಾಖಲಾಗಬೇಕು ಎಂದು ನ್ಯಾಯಾಪೀಠ ಸೂಚಿಸಿದೆ.
2000ರಲ್ಲಿ ಚೌತಲ ಅವರು ಮುಖ್ಯಮಂತ್ರಿಗಳಾಗಿದ್ದಾಗ 3,206 ಕಿರಿಯ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮವೆಸಗಿದ್ದಾರೆ ಎಂದು ಆರೋಪ ಬಂದ ಹಿನ್ನಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದರು. ಚೌತಲ ಮತ್ತು ಅವರು ಪುತ್ರ ಅಜಯ್ ಚೌತಲ ಸೇರಿದಂತೆ 9 ಜನರಿಗೆ ನ್ಯಾಯಾಲಯ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಪ್ರಕರಣದ 44 ಆರೋಪಿಗಳಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.