ಅಧಿಕಾರದಲ್ಲಿ ಯುಪಿಎ ವಿಫಲವಾಗಿದೆ: ಬಿಜೆಪಿ
ಸಮ್ಮಿಶ್ರ ಸರ್ಕಾರ ಮುನ್ನಡೆಸಲು ವಿಶೇಷವಾದ ನಾಯಕತ್ವ ಬೇಕು ಆದರೆ ದೇಶಕ್ಕೆ ಬೇಕಾದ ನಾಯಕತ್ವವನ್ನು ನೀಡಲು ಯುಪಿಎ ವಿಫಲವಾಗಿದೆ...
ನವದೆಹಲಿ: ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸಂಯುಕ್ತ ಪ್ರಗತಿಪರ ಒಕ್ಕೂಟ (ಯುಪಿಎ) ಬುಧವಾರ ತಮ್ಮ ಅಧಿಕಾರವಧಿಯ ನಾಲ್ಕನೇ ವರ್ಷವನ್ನು ಪೂರೈಸಿದೆ. ಪ್ರಸ್ತುತ ಸರ್ಕಾರ ತಮ್ಮ ವಾರ್ಷಿಕೋತ್ಸವವನ್ನು ಕೊಂಡಾಡುತ್ತಿದ್ದರೆ, ಇತ್ತ ವಿಪಕ್ಷ ಬಿಜೆಪಿ ಯುಪಿಎ ಅಧಿಕಾರ ನಿಭಾಯಿಸುವುದರಲ್ಲಿ ವಿಫಲಗೊಂಡಿದೆ ಎಂದು ಟೀಕಿಸಿದೆ.
ನವದೆಹಲಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಲೋಕಸಭೆಯ ವಿಪಕ್ಷ ನಾಯಕಿ ಹಾಗು ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್, ಯುಪಿಎ ನಾಯಕತ್ವವು ವಿಭಜನೆಗೊಂಡಿದೆ ಎಂದು ಹೇಳಿದ್ದಾರೆ.
ಅದೇ ವೇಳೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಸುಷ್ಮಾ, ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದರೂ ಅವರೊಂದು ಪಕ್ಷದ ಅಥವಾ ದೇಶದ ನಾಯಕರಲ್ಲ.
ಯುಪಿಎ ಮಿತ್ರಪಕ್ಷಗಳು ತಮ್ಮ ಸಮಸ್ಯೆಯನ್ನು ಬಗೆಹರಿಸಲು ಪ್ರಧಾನಿಯವರ ಜತೆ ಚರ್ಚೆ ನಡೆಸುತ್ತವೆ. ಆದರೆ ಸಮಸ್ಯೆ ಪರಿಹಾರಕ್ಕಾಗಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮೊರೆ ಹೋಗುತ್ತಾರೆ ಎಂದು ಸುಷ್ಮಾ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರಕ್ಕೆ ವಿಶೇಷವಾದ ನಾಯಕತ್ವ ಬೇಕು ಆದರೆ ದೇಶಕ್ಕೆ ಬೇಕಾದ ನಾಯಕತ್ವವನ್ನು ನೀಡಲು ಯುಪಿಎಗೆ ಸಾಧ್ಯವಾಗಿಲ್ಲ.
ಜನರಿಗೆ ಮೆಚ್ಚುಗೆಯಾಗದೇ ಇರುವ ಹಲವಾರು ನಿರ್ಧಾರಗಳನ್ನು ಯುಪಿಎ ಸರ್ಕಾರ ಅನೇಕ ಬಾರಿ ತೆಗೆದುಕೊಂಡಿದೆ. ಆವಾಗೆಲ್ಲಾ ಯುಪಿಎ ಅಧ್ಯಕ್ಷೆ ಪತ್ರ ಬರೆದು ಸರ್ಕಾರದ ನಿರ್ಧಾರಗಳನ್ನು ವಾಪಸ್ ತೆಗೆದುಕೊಂಡ ಘಟನೆಗಳು ನಡೆದಿವೆ.
ಈ ಮೂಲಕ ಕೆಟ್ಟ ನಿರ್ಧಾರ ತೆಗೆದುಕೊಂಡ ಸರ್ಕಾರದ ವಿರುದ್ಧ ಜನರು ದೂರುವುದು ಹಾಗು ನಿರ್ಧಾರವನ್ನು ವಾಪಸ್ ತೆಗೆದುಕೊಂಡ ಪಕ್ಷದ ಬಗ್ಗೆ ಮೆಚ್ಚುಗೆ ಸೂಚಿಸುವ ಪ್ರಕ್ರಿಯೆಗಳು ನಡೆದುಕೊಂಡು ಬಂದಿವೆ.
ಎನ್‌ಡಿಎ ಸರ್ಕಾರ ಖಜಾನೆ ತುಂಬಿಸಿಯೇ ಯುಪಿಎಗೆ ಅಧಿಕಾರ ಹಸ್ತಾಂತರಿಸಿತ್ತು. ಆದರೆ ಈಗ ದೇಶದ ಆರ್ಥಿಕ ಸ್ಥಿತಿ ಶೋಚನೀಯವಾಗಿದೆ. ಜನರು ಹೂಡಿಕೆ ಮಾಡುವ ಬದಲು ಹಣ ವಾಪಸ್ ತೆಗೆದುಕೊಳ್ಳುತ್ತಿದ್ದಾರೆ.
ಯುಪಿಎ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ತಾಂಡವವಾಡಿದೆ. ಸಾಮಾನ್ಯ ಜನರು ಬೆಲೆ ಏರಿಕೆಯ ಬಿಸಿಯಲ್ಲಿ ಬೆಂದಿದ್ದಾರೆ. ಯಾವೊಂದು ಸರ್ಕಾರದ ಅವಧಿಯಲ್ಲೂ ಹಣದುಬ್ಬರ ಇಷ್ಟೊಂದು ಏರಿಕೆಯಾಗಿರಲಿಲ್ಲ ಎಂದು ಸುಷ್ಮಾ ಯುಪಿಎ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.