ಯರವಾಡ ಜೈಲಿಗೆ ಸಂಜಯ್ ದತ್
1993 ಮುಂಬೈ ಸರಣಿ ಬಾಂಬ್ ಸ್ಪೋಟಕ್ಕೆ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಂಜಯ್ ದತ್...
ಪುಣೆ: 1993 ಮುಂಬೈ ಸರಣಿ ಬಾಂಬ್ ಸ್ಪೋಟಕ್ಕೆ ಪ್ರಕರಣದಲ್ಲಿ 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಪುಣೆಯಲ್ಲಿರುವ ಯರವಾಡ ಜೈಲಿಗೆ ಬುಧವಾರ ಸ್ಥಳಾಂತರಿಸಲಾಗಿದೆ.
ಇಂದು ಬೆಳಿಗ್ಗೆ 4 ಗಂಟೆಗೆ ಮುಂಬೈನ ಅರ್ಥುರ್ ಜೈಲಿನಿಂದ ಪುಣೆ ಜೈಲಿಗೆ ಸ್ಥಳಾಂತರಿಸಲಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಭದ್ರತಾ ದೃಷ್ಟಿಯಿಂದ ಸಂಜಯ್ ಅವರನ್ನು ಗೌಪ್ಯವಾಗಿ ಪುಣೆ ಜೈಲಿಗೆ ಸ್ಥಳಾಂತರಿಸಲಾಯಿತು ಎಂದು ಹೇಳಿರುವ ಅಧಿಕಾರಿಗಳು, ಸಂಜಯ್ ದತ್ ಅವರು ತಮಗೆ ಅರ್ಥುರ್ ಜೈಲಿನಲ್ಲಿ ಪ್ರಾಣ ಭಯ ಇರುವುದರಿಂದ, ನೇರವಾಗಿ ಯರವಾಡ ಜೈಲಿಗೆ ಬಂದು ಶರಣಾಗುತ್ತೇನೆ ಎಂದು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಯಾವುದೇ ಕಾರಣ ನೀಡದೆ ಅರ್ಜಿ ಹಿಂಪಡೆದಿದ್ದರು ಎಂದು ಹೇಳಿದ್ದಾರೆ.
1993ರ ಸರಣಿ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಸಂಜಯ್ ದತ್ ಅವರಿಗೆ ಸುಪ್ರೀಂ ಕೋರ್ಟ್ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಈಗಾಗಲೇ 18 ತಿಂಗಳು ಜೈಲಿನಲ್ಲಿ ಕಳೆದಿರುವ ಸಂಜಯ್ ದತ್ ಅವರು, ಇನ್ನುಳಿದ 42 ತಿಂಗಳುಗಳ ಜೈಲಿನಲ್ಲಿರಬೇಕಾಗುತ್ತದೆ.