ಮುಂಬೈ ಪೊಲೀಸ್ರಿಂದ ಸಿಎಸ್ಕೆ ಸಿಇಒ ವಿಚಾರಣೆ ಸಾಧ್ಯತೆ
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ರ ಅಳಿಯ, ಚೆನ್ನೈ ಸೂಪರ್ ಕಿಂಗ್ಸ್...
ಮುಂಬೈ/ಚೆನ್ನೈ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ರ ಅಳಿಯ, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡದ ಸಿಇಒ ಗುರುನಾಥ್ ಮೇಯಪ್ಪನ್ ಅವರ ವಿಚಾರಣೆಗಾಗಿ ಮುಂಬೈ ಪೊಲೀಸರ ತಂಡ ಚೆನ್ನೈಗೆ ಆಗಮಿಸಿದೆ. ಮುಂಬೈ ಪೊಲೀಸರ ಆಗಮನದ ಬಗ್ಗೆ ಚೆನ್ನೈನ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಗುರುನಾಥ್ ಅವರನ್ನು ಇಂದೇ ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ನಲ್ಲಿ ಗುರುನಾಥ್ ಅವರದ್ದೂ ಕೈವಾಡವಿದೆ ಎಂದು ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಬಂಧಿತನಾಗಿರುವ ಬಾಲಿವುಡ್ ನಟ ವಿಂದೂ ದಾರಾಸಿಂಗ್ ಹೇಳಿಕೆ ಮೇರೆಗೆ ಮುಂಬೈ ಪೊಲೀಸರು ಗುರುನಾಥ್ ಅವರನ್ನು ವಿಚಾರಣೆಗೊಳಪಡಿಸಲಿದ್ದಾರೆ.
ಆದಾಗ್ಯೂ, ಸ್ಪಾಟ್ ಫಿಕ್ಸಿಂಗ್ನಲ್ಲಿ ಗುರುನಾಥ್ರ ಹೆಸರು ಕೇಳಿ ಬಂದಂದಿನಿಂದ ಗುರುನಾಥ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಇತ್ತ ಕೊಲ್ಕತ್ತಾದಲ್ಲಿ ಅಜಿತ್ ಸುರೇಖಾ ಎಂಬ ಬುಕ್ಕಿ ಸೇರಿದಂತೆ 9 ಬುಕ್ಕಿಗಳನ್ನು ಕೊಲ್ಕತ್ತಾ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬುಕ್ಕಿಗಳ ಕೈಯಿಂದ 3 ಲಕ್ಷ ರು. ನಗದು, 8 ಮೊಬೈಲ್ ಫೋನ್ ಮತ್ತುನ ಬೆಟ್ಟಿಂಗ್ ಸಾಫ್ಟ್ವೇರ್ಗಳಿರುವ 2 ಲ್ಯಾಪ್ಟಾಪ್ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ 9 ಆರೋಪಿಗಳನ್ನು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು.
ಏತನ್ಮಧ್ಯೆ, ಶ್ರೀಶಾಂತ್ ಕೋಣೆಯಿಂದ ವಶ ಪಡಿಸಿದ ಸಾಕ್ಷ್ಯಗಳನ್ನು ತಮಗೆ ಹಸ್ತಾಂತರಿಸಬೇಕೆಂದು ಕೋರಿ ದೆಹಲಿ ಪೊಲೀಸರು ಮುಂಬೈ ಪೊಲೀಸರಿಗೆ ಪತ್ರವೊಂದನ್ನು ಬರೆದಿದ್ದಾರೆ.