ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸನ್ ರಾಜಿನಾಮೆ ಸಾಧ್ಯತೆ: ಮೂಲಗಳು
ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಚೈನ್ನೈ ಸೂಪರ್ ಕಿಂಗ್ಸ್ ಸಿಇಓ ಹಾಗೂ ಅಳಿಯ ಗುರುನಾಥ್ ಮೇಯಪ್ಪನ್ ಹೆಸರು..
ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅವರ ಅಳಿಯ ಮತ್ತು ಚೈನ್ನೈ ಸೂಪರ್ ಕಿಂಗ್ಸ್ ಸಿಇಓ ಗುರುನಾಥ್ ಮೇಯಪ್ಪನ್ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಶ್ರೀನಿವಾಸ್‌ನ ಅವರು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಇದೆ.
ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ನಡೆದಿರುವ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಗುರುನಾಥ್ ಹೆಸರು ಕೇಳಿ ಬಂದಿದೆ. ಒಂದು ವೇಳೆ ಅವರ ವಿರುದ್ಧ ಸಾಕ್ಷ್ಯಗಳು ಕಂಡು ಬಂದರೆ, ಬಿಸಿಸಿಐ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರನ್ನು ಸ್ಥಾನದಿಂದ ಕೆಳಗಿಳಿಸಲಾಗುವುದು. ಶ್ರೀನಿವಾಸ್‌ಗಿಂತ ಕ್ರಿಕೆಟ್ ಪಂದ್ಯಾವಳಿ ನಮಗೆ ಮುಖ್ಯ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಹಗರಣ ಸಂಬಂಧ ಮೇಯಪ್ಪನ್ ಅವರ ವಿಚಾರಣೆಗಾಗಿ ಮುಂಬೈ ಪೊಲೀಸರ ತಂಡ ಚೆನ್ನೈಗೆ ಆಗಮಿಸಿತ್ತು. ಆದರೆ ಮೇಯಪ್ಪನ್ ಅವರು ತಮ್ಮ ನಿವಾಸದಲ್ಲಿರದಿದ್ದ ಕಾರಣ ಪೊಲೀಸರು ಸಮನ್ಸ್ ಜಾರಿ ಮಾಡಿದ್ದರು.
ಇಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯೊಳಗಾಗಿ ಕ್ರೈಂ ಬ್ರಾಂಚ್‌ಗೆ ಬಂದು ಶರಣಾಗಬೇಕು ಎಂದು ಸೂಚಿಸಿದ್ದರು. ಒಂದು ವೇಳೆ ಗುರುನಾಥ್ ಅವರನ್ನು ಬಂಧಿಸಿದರೆ ಶ್ರೀನಿವಾಸನ್ ಕುರ್ಚಿಯಿಂದ ಕೆಳಗಿಳಿಯಬೇಕಾಗುತ್ತದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.