ಸ್ಪಾಟ್ ಫಿಕ್ಸಿಂಗ್: ಅಂತರಾಷ್ಟ್ರೀಯ ಬುಕ್ಕಿ ಬಂಧನ
ಹೈದ್ರಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಸ್ಪಾಟ್ ಫಿಕ್ಸಿಂಗ್ ಹಗರಣ ಸಂಬಂಧ ಅಂತರಾಷ್ಟ್ರೀಯ ಬುಕ್ಕಿಯೊಬ್ಬನನ್ನು ಪೊಲೀಸರು ಶುಕ್ರವಾರ ಹೈದ್ರಾಬಾದ್ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.
ಮುಂಬೈನ ನಿವಾಸಿ ಮೊಹ್ದ್ ಯಹ್ಯಾ ಬಂಧಿತ ಆರೋಪಿ. ಸ್ಪಾಟ್ ಫಿಕ್ಸಿಂಗ್ ಹಗರಣ ಬಯಲಿಗೆ ಬರುತ್ತಿದ್ದಂತೆ ತಾನು ಬಂಧನಕ್ಕೊಳಗಾಗಬಹುದು ಎಂದು ತಿಳಿದ ಬುಕ್ಕಿ ಮೊಹ್ದ್, ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದುಬೈಗೆ ಹಾರಲು ಸಂಚು ರೂಪಿಸಿದ್ದನು. ಆದರೆ ಅಷ್ಟರಲ್ಲಿ ಪೊಲೀಸರು ವಿಮಾನ ನಿಲ್ದಾಣಕ್ಕೆ ತಲುಪಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ದೆಹಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಹೇಳಿದ್ದಾರೆ.
ಬುಕ್ಕಿ ಮೊಹ್ದ್ ಯಹ್ಯಾನನ್ನು ದೆಹಲಿಗೆ ಕರೆತರಲಾಗಿದ್ದು, ಸ್ಪಾಟ್ ಫಿಕ್ಸಿಂಗ್ ಹಗರಣ ಸಂಬಂಧ ವಿಚಾರಣೆಗೊಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಈಗಾಗಲೇ ಬಂಧಿತರಾಗಿರುವ ಬುಕ್ಕಿಗಳು ವಿಚಾರಣೆ ವೇಳೆ ಅಂತರಾಷ್ಟ್ರೀಯ ಬುಕ್ಕಿ ಮೊಹ್ದ್ ಯಹ್ಯಾ ಎಂದು ಹೆಸರು ಬಹಿರಂಗ ಪಡಿಸಿದ ಹಿನ್ನಲೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.