ಬೆಟ್ಟಿಂಗ್ ದಂಧೆ ಕಡಿವಾಣಕ್ಕೆ ಕಠಿಣ ಕಾನೂನು: ಕಪಿಲ್ ಸಿಬಲ್
ಕ್ರಿಕೆಟ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಅವ್ಯವಹಾರಗಳು ಹೆಚ್ಚುತ್ತಿದ್ದು, ಇಂತಹ ಅಕ್ರಮಗಳ ಕಡಿವಾಣಕ್ಕೆ ಕಠಿಣ..
ನವದೆಹಲಿ: ಕ್ರಿಕೆಟ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಅವ್ಯವಹಾರಗಳು ಹೆಚ್ಚುತ್ತಿದ್ದು, ಇಂತಹ ಅಕ್ರಮಗಳ ಕಡಿವಾಣಕ್ಕೆ ಕಠಿಣ ಕಾನೂನು ರೂಪಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಕೇಂದ್ರ ಕಾನೂನು ಸಚಿವ ಕಪಿಲ್ ಸಿಬಲ್ ಅವರು ಶನಿವಾರ ಹೇಳಿದ್ದಾರೆ.
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಬಲ್, ಇತ್ತೀಚಿಗೆ ಹಲವು ಕ್ರೀಡೆಗಳಲ್ಲಿ ಅಪ್ರಮಾಣಿಕತೆ ಕಂಡುಬರುತ್ತಿದೆ. ವಿಶೇಷವಾಗಿ ಕ್ರಿಕೆಟ್‌ನಲ್ಲಿ ಸ್ಪಾಟ್ ಫಿಕ್ಸಿಂಗ್, ಮ್ಯಾಚ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್‌ನಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಈ ರೀತಿಯ ಅಕ್ರಮಗಳನ್ನು ತಡೆಯಲು ಕಠಿಣ ಕಾನೂನು ಅಗತ್ಯ ಎಂದು ಹೇಳಿದ್ದಾರೆ.
ಕೇವಲ ಕ್ರಿಕೆಟ್‌ನಲ್ಲಷ್ಟೇ ಅಲ್ಲ ಪ್ರತಿಯೊಂದು ಕ್ರೀಡೆಯಲ್ಲೂ ಅಕ್ರಮಗಳು ನಡೆಯುತ್ತಿವೆ. ಈಗಿರುವ ಕಾಯ್ದೆಗಳಿಂದ ಕ್ರೀಡೆಯಲ್ಲಿನ ಅಕ್ರಮಗಳನ್ನು ತಡೆಯುವುದು ಕಷ್ಟ. ಹೀಗಾಗಿ ಹೊಸ ಕಾನೂನು ರೂಪಿಸುವ ಅಗತ್ಯ ಇದ್ದು, ಈ ಸಂಬಂಧ ಅಟಾರ್ನಿ ಜನರಲ್ ಅವರೊಂದಿಗೆ ಚರ್ಚಿಸಿರುವುದಾಗಿ ಸಿಬಲ್ ತಿಳಿಸಿದರು.