ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಸೇನೆ ನಿಯೋಜನೆ ಇಲ್ಲ: ಆಂಟನಿ

ಛತ್ತೀಸ್‌ಗಡ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ 28 ಜನರ ಹತ್ಯೆ ಹಿನ್ನೆಲೆಯಲ್ಲಿ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಸೇನೆ ..

Lingaraj Badiger
Updated On : 27 May 2013, 3:26 am

ನವದೆಹಲಿ: ಛತ್ತೀಸ್‌ಗಡ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ 28 ಜನರ ಹತ್ಯೆ ಹಿನ್ನೆಲೆಯಲ್ಲಿ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಸೇನೆ ನಿಯೋಜಿಸುವುದಿಲ್ಲ ಎಂದು ರಕ್ಷಣಾ ಸಚಿವ ಎ.ಕೆ.ಆಂಟನಿ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಛತ್ತೀಸ್‌ಗಡದ ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಸೇನೆ ನಿಯೋಜಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಆದರೆ ಅರೆ ಸೇನಾಪಡೆ ಸೇರಿದಂತೆ ಕಾರ್ಯಾಚರಣೆಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಆಂಟನಿ ತಿಳಿಸಿದರು.

ನಕ್ಸಲ್ ನಿಗ್ರಹ ಕಾರ್ಯಾಚರಣೆಗೆ ಹೆಚ್ಚುವರಿ ಸೇನಾಪಡೆ ಕಳುಹಿಸುವಂತೆ ಛತ್ತೀಸ್‌ಗಡ ಸರ್ಕಾರ ಮನವಿ ಮಾಡಿರುವ ಬಗ್ಗೆ ತಮಿಳುನಾಡಿನ ತಂಜಾವುರಿನಲ್ಲಿ ಪ್ರತಿಕ್ರಿಯಿಸಿದ ಆಂಟನಿ, ಕೇಂದ್ರ ಸರ್ಕಾರ 2000 ಹೆಚ್ಚುವರಿ ಅರೆ ಸೇನಾಪಡೆ ಸಿಬ್ಬಂದಿಯನ್ನು ಕಳುಹಿಸಿದೆ. ಛತ್ತೀಸ್‌ಗಡದಾದ್ಯಂತ ಈಗಾಗಲೇ 30 ಸಾವಿರ ಅರೆ ಸೇನಾಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಪರಿವರ್ತನ್ ರ್ಯಾಲಿ ವೇಳೆ ಅಪಹರಣಕ್ಕೊಳಗಾಗಿದ್ದ ಛತ್ತೀಸ್‌ಗಡ ಕಾಂಗ್ರೆಸ್ ಅಧ್ಯಕ್ಷ ನಂದ ಕುಮಾರ್ ಹಾಗೂ ಅವರ ಪುತ್ರ ದಿನೇಶ್ ಮೃತದೇಹ ನಿನ್ನೆ ಪತ್ತೆಯಾಗಿತ್ತು. ಪರಿವರ್ತನ್ ರ್ಯಾಲಿ ಮುಗಿಸಿ ಹಿಂತಿರುಗುತ್ತಿದ್ದಾಗ ದಾಳಿ ನಡೆಸಿದ್ದ 250ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ನಕ್ಸಲರು ಮಾಜಿ ಗೃಹ ಸಚಿವ ಮಹೇಂದರ್ ಕರ್ಮಾ ಅವರನ್ನು ಹತ್ಯೆ ಮಾಡಿದ್ದರು.ಈ ವೇಳೆ ನಂದ ಕುಮಾರ್ ಹಾಗೂ ದಿನೇಶ್ ಹಾಗೂ ಎಂಟು ಮಂದಿ ಭದ್ರತಾ ಸಿಬ್ಬಂದಿಯನ್ನು ನಕ್ಸಲರು ಅಪಹರಿಸಿದ್ದರು. ಈ ಹತ್ತೂ ಮಂದಿಯ ಮೃತದೇಹ ನಕ್ಸಲ್ ಪ್ರದೇಶವಾದ ಬಸ್ತಾರ್‌ನ ಜೈರಾಮ್ ಕಣಿವೆಯಲ್ಲಿ ಪತ್ತೆಯಾಗಿದೆ. ಈ ಮೂಲಕ ನಕ್ಸಲರ ದಾಳಿಯಲ್ಲಿ ಹತ್ಯೆಯಾದವರ ಸಂಖ್ಯೆ 28ಕ್ಕೇರಿದಂತಾಗಿದೆ.

ಶುಕ್ಲಾ ಸ್ಥಿತಿ ಗಂಭೀರ: ಈ ನಡುವೆ, ಘಟನೆ ವೇಳೆ ಹೊಟ್ಟೆಗೆ ಗುಂಡುಹೊಕ್ಕಿ ಗಂಭೀರ ಗಾಯಗೊಂಡಿದ್ದ ಕೇಂದ್ರದ ಮಾಜಿ ಸಚಿವ ವಿ.ಸಿ. ಶುಕ್ಲಾ ಇನ್ನೂ ಪ್ರಾಣಾಪಾಯದಿಂದ ಪಾರಾಗಿಲ್ಲ. ಶುಕ್ಲಾ ಹೊಟ್ಟೆಗೆ ಮೂರು ಗುಂಡು ಹೊಕ್ಕಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement