ತಿಹಾರ್ ಜೈಲಿಗೆ ಶ್ರೀಶಾಂತ್
ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ಕಳೆದ ಎರಡು ವಾರಗಳ ಹಿಂದೆ ಬಂಧನಕ್ಕೆ ಒಳಗಾಗಿದ್ದ ..
ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ಕಳೆದ ಎರಡು ವಾರಗಳ ಹಿಂದೆ ಬಂಧನಕ್ಕೆ ಒಳಗಾಗಿದ್ದ ಕ್ರಿಕೆಟಿಗ ಶ್ರೀಶಾಂತ್ ಅವರನ್ನು ಮಂಗಳವಾರ ನ್ಯಾಯಾಂಗ ಬಂಧನಕ್ಕೆ ದೆಹಲಿ ಕೋರ್ಟ್ ಆದೇಶಿಸಿದ್ದು, ಅವರನ್ನು ತಿಹಾರ್ ಜೈಲಿಗೆ ಕಳುಹಿಸುವ ಸಾಧ್ಯತೆ ಇದೆ.
ಪೊಲೀಸ್ ಬಂಧನದ ಅವಧಿ ಇಂದಿಗೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಶ್ರೀಶಾಂತ್ ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಬಂಧನ ಅವಧಿ ವಿಸ್ತರಿಸುವಂತೆ ಮನವಿ ಮಾಡಿದರು. ಆದರೆ ಪೊಲೀಸರ ಮನವಿಯನ್ನು ತಿರಸ್ಕರಿಸಿದ ಕೋರ್ಟ್, ಜೂನ್ 4ರವರೆಗೆ ಶ್ರೀಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಈ ಮಧ್ಯೆ ಶ್ರೀಶಾಂತ್ ಸಲ್ಲಿಸಿರುವ ಜಾಮೀನು ಅರ್ಜಿ ಜೂನ್ 3ಕ್ಕೆ ವಿಚಾರಣೆಗೆ ಬರಲಿದ್ದು, ಅಲ್ಲಿಯವರೆಗೆ ಶ್ರೀಶಾಂತ್ಗೆ ತಿಹಾರ್ ಜೈಲೇ ಗತಿ.
ಸ್ಪಾಟ್ ಫಿಕ್ಸಿಂಗ್ನಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ರಾಜಸ್ತಾನ್ ರಾಯಲ್ಸ್ ತಂಡದ ಅಜಿತ್ ಚಾಂಡಿಲಾ ಮತ್ತು ಅಂಕೀತ್ ಚವ್ಹಾಣ್ ಅವರೊಂದಿಗೆ ಶ್ರೀಶಾಂತನನ್ನು ಪೊಲೀಸರು ಬಂಧಿಸಿದ್ದರು. ನಂತರ ಪ್ರಕರಣ ಸಂಬಂಧ ಹಲವು ಬುಕ್ಕಿಗಳನ್ನು ಸಹ ಪೊಲೀಸರು ಬಂಧಿಸಿದ್ದಾರೆ.