ವಿಧಾನಸಭೆ ಕಲಾಪ ನಾಳೆಗೆ ಮುಂದೂಡಿಕೆ
216 ಶಾಸಕರ ಪ್ರಮಾಣ ವಚನ ಸ್ವೀಕಾರದೊಂದಿಗೆ ಗುರುವಾರ ವಿಧಾನಸಭೆ ಕಲಾಪವನ್ನು ನಾಳೆಗೆ ಮುಂದೂಡಲಾಗಿದೆ.
ಬೆಂಗಳೂರು: 216 ಶಾಸಕರ ಪ್ರಮಾಣ ವಚನ ಸ್ವೀಕಾರದೊಂದಿಗೆ ಗುರುವಾರದ ವಿಧಾನಸಭೆ ಕಲಾಪ ಅಂತ್ಯಗೊಂಡಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ.
ಹೊಸದಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸ್ವೀಕಾರ ಕಾರ್ಯದೊಂದಿಗೆ ನಿನ್ನೆ 14ನೇ ವಿಧಾನಸಭೆಯ ಚೊಚ್ಚಲ ಅಧಿವೇಶನಕ್ಕೆ ಚಾಲನೆ ಸಿಕ್ಕಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಈವರಗೆ 216 ಶಾಸಕರು ಪ್ರಮಾಣ ಸ್ವೀಕರಿಸಿದ್ದಾರೆ. ಇನ್ನು ಅಧಿವೇಶನಕ್ಕೆ ಬಾರದ ಏಳು ಶಾಸಕರು ಮುಂದಿನ ದಿನಗಳಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಸಂಪುಟ ಸಹೋದ್ಯೋಗಿಗಳು, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಸ್ಪೀಕರ್ ಹುದ್ದೆ ಅಭ್ಯರ್ಥಿ ಕಾಗೋಡು ತಿಮ್ಮಪ್ಪ ಸೇರಿದಂತೆ ಒಟ್ಟು 146 ಶಾಸಕರು ಮೊದಲ ದಿನ ಪ್ರಮಾಣ ವಚನ ಸ್ವೀಕರಿಸಿದ್ದರು.
ಸಚಿವ ಸ್ಥಾನ ವಂಚಿತ ಕನಕಪುರ ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್, ಬಳ್ಳಾರಿ ಗ್ರಾಮೀಣ ಬಿಎಸ್ಆರ್ ಕಾಂಗ್ರೆಸ್ ಶಾಸಕ ಬಿ.ಶ್ರೀರಾಮುಲು, ಕಂಪ್ಲಿ ಬಿಎಸ್ಆರ್ ಕಾಂಗ್ರೆಸ್ ಶಾಸಕ ಸುರೇಶ್ ಬಾಬು ಹಾಗೂ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಅವರು ಎರಡು ದಿನಗಳ ಸದನಕ್ಕೆ ಗೈರು ಆಗಿದ್ದಾರೆ.
ಇಂದು ಎಚ್ಡಿಕೆಯಿಂದ ಪ್ರಮಾಣ
ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಭಗವಂತನ ಹೆಸರಿನಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇಂದು ಸಹ ಹಲವು ಶಾಸಕರು ಬೇರೆ ಬೇರೆ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಲು ಮುಂದಾದರು. ಆದರೆ ಇದಕ್ಕೆ ಅವಕಾಶ ನೀಡದ ಹಂಗಾಮಿ ಸ್ಪೀಕರ್ ಮಾಲಿಕಯ್ಯ ಗುತ್ತೇದಾರ್ ಅವರು ಸಂವಿಧಾನ ಬದ್ದವಾಗಿ ಪ್ರಮಾಣ ಸ್ವೀಕರಿಸಿ ಎಂದು ಸೂಚಿಸಿದರು. ಹೀಗಾಗಿ ನಿನ್ನೆ ಕಾವೇರಿ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದ ಶಾಸಕ ಅಪ್ಪಚ್ಚು ರಂಜನ್ ಅವರು ಇಂದು ಮತ್ತೆ ಪ್ರಮಾಣ ವಚನ ಸ್ವೀಕರಿಸಿದರು.