ನಾಳೆ ಅಧ್ಯಕ್ಷ ಸ್ಥಾನಕ್ಕೆ ಶ್ರೀನಿ ರಾಜಿನಾಮೆ?
ಸ್ಪಾಟ್ ಫಿಕ್ಸಿಂಗ್ ಹಗರಣದಿಂದಾಗಿ ರಾಜಿನಾಮೆ ಒತ್ತಡಕ್ಕೆ ಮಣಿದಿರುವ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರು..
ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಹಗರಣದಿಂದಾಗಿ ರಾಜಿನಾಮೆ ಒತ್ತಡಕ್ಕೆ ಮಣಿದಿರುವ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರು ಭಾನುವಾರ ಚೆನ್ನೈನಲ್ಲಿ ಬಿಸಿಸಿಐನ ಕಾರ್ಯಕಾರಣಿ ಸಮಿತಿಯ ತುರ್ತು ಸಭೆಯನ್ನು ಕರೆದಿದ್ದು, ಸಭೆಯಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಸಾಧ್ಯತೆಗಳಿವೆ.
ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ, ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರು ಬಂಧನಕ್ಕೊಳಗಾದ ಹಿನ್ನೆಲೆಯಲ್ಲಿ, ಶ್ರೀನಿವಾಸನ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂಬ ಒತ್ತಡ ಬಿಸಿಸಿಐನಲ್ಲಿ ಹೆಚ್ಚಾಗಿತ್ತು. ಈ ಪ್ರಕರಣಕ್ಕೆ ತಿಲಾಂಜಲಿ ಹಾಕಲು ಮುಂದಾಗಿರುವ ಶ್ರೀನಿವಾಸನ್ ನಾಳೆ ಚೆನ್ನೈನಲ್ಲಿ ತುರ್ತು ಸಭೆ ಕರೆದಿದ್ದಾರೆ.
ಈ ಹಗರಣದ ಸಂಬಂಧ, ಶ್ರೀನಿವಾಸನ್ ಅವರು, ಬಿಸಿಸಿಐ ತುರ್ತು ಸಭೆಯನ್ನು ಜೂನ್ 8ರಂದು ನಡೆಸಲು ಮುಂದಾಗಿದ್ದರು. ಆದರೆ ಶ್ರೀನಿವಾಸನ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲೇಬೇಕೆಂಬ ಒತ್ತಡ ಬಿಸಿಸಿಐನಲ್ಲಿ ಹೆಚ್ಚಾಗಿದ್ದರಿಂದ ಇದಕ್ಕೆ ಮಣಿದ ಅವರು ತುರ್ತು ಸಭೆಯನ್ನು ನಾಳೆ ಕರೆದಿದ್ದಾರೆ.
ಶ್ರೀನಿವಾಸನ್ ಅವರ ನಡೆಯಿಂದ ಬೇಸತ್ತಿದ್ದ, ಬಿಸಿಸಿಐನ ಸಹ- ಕಾರ್ಯದರ್ಶಿ ಠಾಕೂರ್, ಕಾರ್ಯದರ್ಶಿ ಸಂಜಯ್ ಜಗದಾಳೆ ಹಾಗೂ ಖಜಾಂಚಿ ಶಿರ್ಕೆ ಅವರು ಶ್ರೀನಿವಾಸನ್ ತುರ್ತು ಸಬೆ ಕರೆಯದಿದ್ದರೆ, ತಮ್ಮ ಸ್ಥಾನಗಳಿಗೆ ರಾಜಿನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದರು. ಈ ಎಲ್ಲಾ ಒತ್ತಡಗಳಿಗೆ ಕೊನೆಗೂ ಮಣಿದಿರುವ ಶ್ರೀನಿವಾಸನ್, ಕಾರ್ಯಕಾರಣಿ ಮಂಡಳಿಯ ತುರ್ತು ಸಭೆ ಕರೆದಿದ್ದಾರೆ.