ಮರು ನೇಮಕ ಸಂತಸ ತಂದಿದೆ: ಇನ್ಫಿ ಮೂರ್ತಿ
ಇನ್‌ಫೋಸಿಸ್ ಸಂಸ್ಥೆಯ ಕಾರ್ಯಕಾರಿ ಅಧ್ಯಕ್ಷನಾಗಿ ಮರು ನೇಮಕ ಮಾಡಿರುವುದು ಸಂತಸ ತಂದಿದ್ದು, ಸಂಸ್ಥೆಯಲ್ಲಿ ಮತ್ತೆ...
ಬೆಂಗಳೂರು/ನವದೆಹಲಿ: ಇನ್‌ಫೋಸಿಸ್ ಸಂಸ್ಥೆಯ ಕಾರ್ಯಕಾರಿ ಅಧ್ಯಕ್ಷನಾಗಿ ಮರು ನೇಮಕ ಮಾಡಿರುವುದು ಸಂತಸ ತಂದಿದ್ದು, ಸಂಸ್ಥೆಯಲ್ಲಿ ಮತ್ತೆ ಜವಾಬ್ದಾರಿಯುತ ಕಾರ್ಯ ನಿರ್ವಹಿಸಲು ಇದೊಂದು ಸುವರ್ಣ ಅವಕಾಶ ಎಂದು ಇನ್‌ಫೋಸಿಸ್‌ನ ಸಂಸ್ಥಾಪಕ ನಾರಾಯಣ ಮೂರ್ತಿ ಶನಿವಾರ ಹರ್ಷ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಇನ್‌ಫೋಸಿಸ್‌ನ ಪ್ರಧಾನ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೂರ್ತಿ ಅವರು, ಇನ್‌ಫೋಸಿಸ್ ಸಂಸ್ಥೆಗೆ ಕಾರ್ಯಕಾರಿ ಅಧ್ಯಕ್ಷರಾಗಿ ಮರು ನೇಮಕ ಮಾಡಿರುವುದು ಸಂತೋಷದ ವಿಷಯ. ಮತ್ತೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವುದು ನನ್ನಲ್ಲಿ ಹೊಸ ಚೈತನ್ಯ ತಂದಿದೆ. ಹೀಗಾಗಿ ಸಂಸ್ಥೆಯ ಆಡಳಿತ ಮಂಡಳಿಗೆ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಇನ್‌ಫೋಸಿಸ್ ಸಂಸ್ಥೆಯ ಆಡಳಿತ ಮಂಡಳಿ ಕೈಗೊಂಡಿರುವ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದಿರುವ ಮೂರ್ತಿ ಅವರು, ಈಗಲೇ ತಮ್ಮ ನಿರ್ಧಾರವನ್ನು ತಿಳಿಸುವುದಿಲ್ಲ. ಮೊದಲಿಗೆ ತಮ್ಮ ಕುಟುಂಬದೊಂದಿಗೆ ಚರ್ಚಿಸಿ ಆ ನಂತರ ನಿರ್ಧಾರವನ್ನು ಪ್ರಕಟಿಸುವುದಾಗಿ ಹೇಳಿದ್ದಾರೆ.
ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಕೆ.ವಿ.ಕಾಮತ್ ಸ್ಥಾನಕ್ಕೆ ನನ್ನನ್ನು ದಿಢೀರ್ ನೇಮಕ ಮಾಡಿರುವುದು ನನಗೆ ಅಚ್ಚರಿ ಉಂಟು ಮಾಡಿದೆ. ಆದರೆ ಸ್ವತಃ ಕೆ.ವಿ. ಕಾಮತ್ ಅವರು ನನ್ನನ್ನು ಸಂಪರ್ಕಿಸಿ ಮೂರ್ತಿ ನೀವು ಮತ್ತೆ ಸಂಸ್ಥೆಗೆ ಮರಳಬೇಕು ಎಂದಿರುವುದು ನನ್ನಲ್ಲಿದ್ದ ಆತಂಕವನ್ನು ಕಡಿಮೆ ಮಾಡಿದೆ ಎಂದು ನಾರಾಯಣ ಮೂರ್ತಿ ಅವರು ತಮ್ಮ ಆತಂಕವನ್ನು ಹೊರಹಾಕಿದರು.