ಮುಸ್ಲಿಂರನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ಅಭಿವೃದ್ಧಿ ಸಾಧ್ಯ: ಸಿಎಂ
ಹಿಂದುಗಳು ಮುಸ್ಲಿಂರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಆಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂಬುದು ರಾಷ್ಟ್ರಪಿತ...
ಬೆಂಗಳೂರು: ಹಿಂದುಗಳು ಮುಸ್ಲಿಂರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಆಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಅವರ ಆಶಯವಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ಹೇಳಿದ್ದಾರೆ.
ಮಹಾತ್ಮಾ ಗಾಂಧಿ ಅವರ 144ನೇ ಜನ್ಮ ದಿನಾಚರಣೆಯ ಅಂಗವಾಗಿ ಇಂದು ಕೆಪಿಸಿಸಿ ಕಚೇರಿಯಲ್ಲಿ ರಾಷ್ಟ್ರಪಿತನಿಗೆ ನಮನ ಸಲ್ಲಿಸಿ ಮಾತನಾಡಿದ ಅವರು, ಹಿಂದು-ಮುಸ್ಲಿಂರು ಒಟ್ಟಾಗಿ ಬಾಳಬೇಕು ಎಂದರು. ಹಿಂದುಗಳು ಮುಸ್ಲಿಂರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಆಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂದು ಗಾಂಧಿಜಿಯವರ ಹೇಳಿದ್ದಾರೆ. ಆದರೆ ಇಂದು ನಾವೇನು ಮಾಡುತ್ತಿದ್ದೇವೆ? ಜಾತಿಯ ಹೆಸರಲ್ಲಿ ಮುಸ್ಲಿಂರನ್ನು ಕಂಡರೆ ಹಿಂದುಗಳಿಗೆ ಆಗಲ್ಲ. ಹಿಂದುಗಳನ್ನು ಕಂಡರೆ ಮುಸ್ಲಿಂರಿಗೆ ಆಗಲ್ಲ ಅಂತಹ ಪರಿಸ್ಥಿತಿ ಉಧ್ಬವವಾಗಿದೆ ಎಂದರು.
ರಾಷ್ಟ್ರಪಿತನ ಆದರ್ಶಗಳು ಇಂದು ಗಾಳಿಗೋಪುರಗಳಾಗುತ್ತಿವೆ. ಅವರ ಆದರ್ಶಗಳನ್ನು ನಾವುಗಳು ಪಾಲಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ಮತಾಂಧಕಾರದಲ್ಲಿ ಮುಳುಗಿ ಹಿಂದು-ಮುಸ್ಲಿಂರು ಬಡಿದಾಡಿಕೊಳ್ಳುತ್ತಿದ್ದಾರೆ. ಜಾತಿ ಹೆಸರಲ್ಲಿ ದೇಶದಲ್ಲಿ ಕೋಮುಗಲಭೆಗಳನ್ನು ಸೃಷ್ಠಿಸುತ್ತಿರುವ ಕೆಲವು ಕೋಮುವಾದಿಗಳು ಇಂದು ಗಾಂಧಿ ಹೆಸರನ್ನು ಹೇಳುವಂತಾಗಿದೆ ಇದು ದೇಶಕ್ಕೆ ಒದಗಿರುವ ದುಃಸ್ಥಿತಿ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಷ್ಟ್ರಪತಿನ ಆಶಯದಂತೆ ನಾವು ಬಾಳಬೇಕು ಆಗ ಮಾತ್ರ ಅವರ ಆದರ್ಶಗಳಿಗೆ ನಾವು ಗೌರವ ಕೊಟ್ಟಂತಾಗುತ್ತದೆ. ಹೀಗಾಗಿ ದೇಶದಲ್ಲಿ ಹಿಂದು-ಮುಸ್ಲಿಂರು ಒಟ್ಟಾಗಿ ಸಹ ಜೀವನ ನಡೆಸಬೇಕು. ಆಗ ದೇಶದ ಅಭಿವೃದ್ಧಿ ಜತೆಗೆ ದೇಶದಲ್ಲಿ ಸಮಗ್ರತೆ ಕಾಪಾಡಲು ಸಾಧ್ಯ ಎಂದು ಸಿದ್ದರಾಮಯ್ಯ ತಿಳಿಸಿದರು.
ಇಂದು ಕೆಪಿಸಿಸಿ ಕಚೇರಿಯಲ್ಲಿ ಗಾಂಧಿ ಜಯಂತಿ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕೆಪಿಸಿಸಿ ರಾಜ್ಯಾಧ್ಯಕ್ಷ ಜಿ. ಪರಮೇಶ್ವರ್. ರಾಜ್ಯ ಗೃಹ ಸಚಿವ ಕೆ.ಜೆ ಜಾರ್ಜ್ ಸೇರಿದಂತೆ ಕಾಂಗ್ರೆಸ್ ಸಚಿವರು ಶಾಸಕರು ಭಾಗವಹಿಸಿದ್ದರು.
ಅಕ್ಟೋಬರ್ 2ರಂದು ಗಾಂಧಿ ಜನ್ಮದಿನವಾಗಿದ್ದು, ದೇಶಾದ್ಯಂತ ಇಂದು ಗಾಂಧಿ ಜಯಂತಿಯಾಗಿ ಆಚರಿಸಲಾಗುತ್ತದೆ. ಅಂತೆಯೇ ಮಹಾತ್ಮ ಗಾಂಧಿಜಿ ಅವರ ಅಹಿಂಸಾ ಚಳುವಳಿಗೆ ಪ್ರತೀಕವಾಗಿ ಇಂದು ವಿಶ್ವಾಧ್ಯಂತ ಅಹಿಂಸಾ ದಿನವಾಗಿ ಅಚರಿಸಲಾಗುತ್ತದೆ.