'ರಾಹುಲ್ ಗಾಂಧಿದು ಬರೀ ಡ್ರಾಮಾ': ಎಸ್ಪಿ
ದೋಷಿ ಶಾಸಕ/ಸಂಸದರನ್ನು ರಕ್ಷಿಸಲು ಹೊರಡಿಸಲಾಗಿದ್ದ ಸುಗ್ರೀವಾಜ್ಞೆಯನ್ನು ಹಿಂಪಡೆಯಲು ಮುಂದಾಗಿರುವ ಕೇಂದ್ರ ಸರ್ಕಾರದ ..
ನವದೆಹಲಿ: ದೋಷಿ ಶಾಸಕ/ಸಂಸದರನ್ನು ರಕ್ಷಿಸಲು ಹೊರಡಿಸಲಾಗಿದ್ದ ಸುಗ್ರೀವಾಜ್ಞೆಯನ್ನು ಹಿಂಪಡೆಯಲು ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಮಾಜವಾದಿ ಪಕ್ಷ ತೀವ್ರವಾಗಿ ವಿರೋಧಿಸಿದೆ. ಅಲ್ಲದೆ ಇದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಡ್ರಾಮಾ ಎಂದು ಕರೆದಿದೆ.
ಸುಗ್ರೀವಾಜ್ಞೆಯನ್ನು ರಾಹುಲ್ ಗಾಂಧಿ ವಿರೋಧಿಸಿರುವುದು ಕೇವಲ ಡ್ರಾಮಾ ಅಷ್ಟೆ ಎಂದು ಸಮಾಜವಾದಿ ಪಕ್ಷದ ನಾಯಕ ನರೇಶ್ ಅಗರವಾಲ್ ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯನ್ನು ವಾಪಸ್ ಪಡೆದರೆ, ಅದು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ. ಸುಗ್ರೀವಾಜ್ಞೆಯನ್ನು ತಮ್ಮ ಪಕ್ಷ ಬೆಂಬಲಿಸುತ್ತದೆ. ಏಕೆಂದರೆ, ಕೇಳ ನ್ಯಾಯಾಲಯಗಳು ನೀಡುವ ತೀರ್ಪಿನ ಆಧಾರದ ಮೇಲೆ ಜನಪ್ರತಿನಿಧಿಗಳ ವಿರುದ್ಧ ಹೇಗೆ ಕ್ರಮ ತೆಗೆದುಕೊಳ್ಳುತ್ತಿರಿ? ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುತ್ತದೆ. ಹೀಗಾಗಿ ಕೇಳ ನ್ಯಾಯಾಲಯದ ತೀರ್ಪಿನಿಂದಾಗಿಯೇ ಅವರು ಏಕೆ ತಮ್ಮ ಸ್ಥಾನವನ್ನು ಕಳೆದುಕೊಳ್ಳಬೇಕು ಎಂದು ಅಗರವಾಲ್ ಪ್ರಶ್ನಿಸಿದ್ದಾರೆ.
ಕೇಂದ್ರ ಸಚಿವ ಸಂಪುಟ ತನ್ನ ಸುಗ್ರೀವಾಜ್ಞೆಗೆ ಬದ್ಧವಾಗಿರಬೇಕು ಮತ್ತು ಒಬ್ಬ ವ್ಯಕ್ತಿಯ ವೈಯಕ್ತಿಕ ಅಭಿಪ್ರಾಯಕ್ಕಾಗಿ ಸುಗ್ರೀವಾಜ್ಞೆಯನ್ನು ವಾಪಸ್ ಪಡೆಯಲಾಗಿದೆ ಎಂಬ ಸಂದೇಶ ರವಾನಿಸಬೇಡಿ ಎಂದು ಅಗರವಾಲ್ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಮನವಿ ಮಾಡಿದ್ದಾರೆ.