17 ವರ್ಷಗಳಿಂದ ಸಿಬಿ'ಐ'ಗೆ ಸಿಗದ ಲಾಲು ಮಾಜಿ ಕಾರ್ಯದರ್ಶಿ
ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಮಾಜಿ ಆಪ್ತ ಕಾರ್ಯದರ್ಶಿಯೊಬ್ಬರು ..
ಪಾಟ್ನಾ: ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಮಾಜಿ ಆಪ್ತ ಕಾರ್ಯದರ್ಶಿಯೊಬ್ಬರು ಕಳೆದ 17 ವರ್ಷಗಳಿಂದ ಸಿಬಿಐ ಕಣ್ಣಿಗೆ ಮಣ್ಣೆರೆಚಿ, ತಲೆಮರೆಸಿಕೊಂಡಿದ್ದಾರೆ.
1990-96ರವರೆಗೆ ಲಾಲು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರ ಆಪ್ತ ಕಾರ್ಯದರ್ಶಿಯಾಗಿದ್ದ ಮುಕುಲ್ ಕಿಶೋರ್ ಕಪೂರ್ ಸಹ ಮೇವು ಹಗರಣದಲ್ಲಿ ಭಾಗಿಯಾಗಿದ್ದರೂ, ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.
ಕಳೆದ ಸೋಮವಾರ ಲಾಲು ಪ್ರಸಾದ್, ಮತ್ತೊರ್ವ ಮಾಜಿ ಮುಖ್ಯಮಂತ್ರಿ ಜಗನ್ನಾಥ್ ಮಿಶ್ರಾ ಹಾಗೂ ಜೆಡಿಯು ಸಂಸದ ಜಗದೀಶ್ ಶರ್ಮಾ ಸೇರಿದಂತೆ ಒಟ್ಟು 45 ಮಂದಿಯನ್ನು ಸಿಬಿಐ ಕೋರ್ಟ್ ದೋಷಿ ಎಂದು ತೀರ್ಪು ನೀಡಿ, ಇಂದು ಅವರಿಗೆಲ್ಲ ಶಿಕ್ಷೆಯನ್ನು ಪ್ರಕಟಿಸಿದೆ. ಆದರೆ ಈ ಹಗರಣ ಬೆಳಕಿಗೆ ಬಂದಾಗಿನಿಂದ ತಲೆಮರೆಸಿಕೊಂಡಿರುವ ಮುಕುಲ್ ಕಿಶೋರ್ ಕಪೂರ್ ಮಾತ್ರ ಇಲ್ಲಿಯವರೆಗೂ ಪತ್ತೆಯಾಗಿಲ್ಲ.
ಮುಕುಲ್ ಕಿಶೋರ್ ಕಪೂರ್, ಲಾಲು ಅವರ ಕಣ್ಣು ಮತ್ತು ಕಿವಿಯಾಗಿದ್ದ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಮೇವು ಹಗರಣದ ಹಣ ಮುಕುಲ್ ಅವರ ಖಾತೆಯಲ್ಲೇ ಇತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಲ್ಲದೆ ಲಾಲು ಮತ್ತು ಇತರೆ ನಾಯಕರನ್ನು ಬಂಧಿಸಲು ಮುಕುಲ್ ಸಿಬಿಐಗೆ ಸಹಕಾರ ನೀಡಿದ್ದರು ಎಂದು ಅವರು ಹೇಳಿದ್ದಾರೆ.
ಆದರೆ ಹಲವು ಬಾರಿ ಶೋಧ ಕಾರ್ಯಾಚರಣೆ ನಡೆಸಿದರೂ 17 ವರ್ಷಗಳಿಂದಲು ಮುಕುಲ್ ಅವರನ್ನು ಬಂಧಿಸುವಲ್ಲಿ ಸಿಬಿಐ ವಿಫಲವಾಗಿದೆ ಎಂದು ಅವರು ದೂರಿದ್ದಾರೆ. ಅಲ್ಲದೆ ಆರ್ಜೆಡಿ ಮುಖ್ಯಸ್ಥರನ್ನು ಕಾಪಾಡುವ ಉದ್ದೇಶದಿಂದಲೇ ಮುಕುಲ್ ಅವರನ್ನು ಬಂಧಿಸಿಲ್ಲ ಎಂದು ಲಾಲು ವಿರೋಧಿಗಳು ಆರೋಪಿಸುತ್ತಿದ್ದಾರೆ.
ಉದ್ದೇಶ ಪೂರ್ವಕವಾಗಿಯೇ ಮುಕುಲ್ರನ್ನು ಭೂಗತ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ನಾಯಕ ನಿತಿನ್ ನವಿನ್ ಅವರು ದೂರಿದ್ದಾರೆ.
ಕಳೆದ ಒಂದು ದಶಕದಿಂದ ಮುಕುಲ್ ಅವರು ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ವಾಸವಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ಮತ್ತು ಪತ್ನಿಯ ಸಂಬಂಧಿಕರು ಮಾಧ್ಯಮಕ್ಕೆ ತಿಳಿಸಿದ್ದಾರೆ.