'ಅಖಂಡ ಆಂಧ್ರ'ದ ಕಿಚ್ಚು: ಹೊತ್ತಿ ಉರಿದ ಸೀಮಾಂಧ್ರ
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಕೇಂದ್ರ ಸರ್ಕಾರ ಚಾಲನೆ ನೀಡುತ್ತಿದ್ದಂತೆ ಅಖಂಡ ಆಂಧ್ರಪ್ರದೇಶಕ್ಕಾಗಿ ಮತ್ತೆ ಪ್ರತಿಭಟನೆಗಳು ಆರಂಭವಾಗಿದ್ದು,..
ಹೈದರಾಬಾದ್: ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಕೇಂದ್ರ ಸರ್ಕಾರ ಚಾಲನೆ ನೀಡುತ್ತಿದ್ದಂತೆ ಅಖಂಡ ಆಂಧ್ರಪ್ರದೇಶಕ್ಕಾಗಿ ಮತ್ತೆ ಪ್ರತಿಭಟನೆಗಳು ಆರಂಭವಾಗಿದ್ದು, ಶುಕ್ರವಾರ ಸೀಮಾಂಧ್ರ ಸಂಪೂರ್ಣ ಸ್ಥಬ್ಧವಾಗಿದೆ.
ವೈಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ಮೋಹನ್ ರೆಡ್ಡಿ ಅವರು 72 ಗಂಟೆಗಳ ಬಂದ್ಗೆ ಕರೆ ನೀಡಿದ್ದು, ಇಂದಿನಿಂದ ಮೂರು ದಿನಗಳ ಕಾಲ ಆಂಧ್ರಪ್ರದೇಶ ಬಂದ್ ಆಗಲಿದೆ. ಬಂದ್ ಬಿಸಿ ತಿರುಪತಿಗೂ ತಟ್ಟಿದ್ದು, ತಿಮ್ಮಪ್ಪನ ಭಕ್ತರು ಪರದಾಡುವಂತಾಗಿದೆ.
ವಿಜಯವಾಡ, ಕರ್ನೂಲ್, ಕಡಪ ಹಾಗೂ ತಿರುಪತಿಯಲ್ಲಿ ತೆಲಂಗಾಣ ವಿರೋಧಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪ್ರತಿಭಟನಾಕಾರರು ರಸ್ತೆ ಮಧ್ಯೆಯೇ ಟೈರ್ಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ರಾತ್ರಿ ಹೊಸ ರಾಜ್ಯ ಮತ್ತು ಸೀಮಾಂಧ್ರ ಎರಡಕ್ಕೂ 10 ವರ್ಷಗಳ ಕಾಲ ಹೈದರಾಬಾದ್ ರಾಜಧಾನಿ ಮತ್ತು ಈ ಸಂಬಂಧ ಹಣಕಾಸು ನೆರವಿನ ಹಂಚಿಕೆ, ನೀರು, ವಿದ್ಯುತ್ ಹಾಗೂ ಗಡಿ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ವಿತ್ತ ಸಚಿವ ಪಿ.ಚಿದಂಬರಂ ನೇತೃತ್ವದ ಸಚಿವ ಸಮಿತಿ ರಚಿಸಲು ಕೇಂದ್ರ ಸಂಪುಟ ಸಮಿತಿ ನಿರ್ಧರಿಸಿತ್ತು. ಇದು ಈಗ ಆಂಧ್ರಪ್ರದೇಶಾದ್ಯಂತ ಪ್ರತಿಭಟನೆ ಕಾರಣವಾಗಿದೆ.
ಈ ಮಧ್ಯೆ ಅಖಂಡ ಆಂಧ್ರಕ್ಕೆ ಒತ್ತಾಯಿಸಿ ಕೇಂದ್ರ ಪ್ರವಾಸೋದ್ಯಮ ಸಚಿವ ಚಿರಂಜೀವಿ ಅವರು ಈಗಾಗಲೇ ರಾಜಿನಾಮೆ ನೀಡಿದ್ದಾರೆ. ಅಲ್ಲದೆ ಮತ್ತೊರ್ವ ಸಚಿವ ಎಂಎಂ ಪಲ್ಲಂ ರಾಜು ಅವರು ಸಹ ರಾಜಿನಾಮೆಗೆ ಮುಂದಾಗಿದ್ದಾರೆ.
ಈ ನಡುವೆ ಸೀಮಾಂಧ್ರದ ಕಾಂಗ್ರೆಸ್ ಸಂಸದ ಎಲ್.ರಾಜಗೋಪಾಲ್ ಅವರು ಈ ಸಂಬಂಧ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿ ಇಂದು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯ ತತ್ವ ಸಿದ್ಧಾಂತಗಳನ್ನು ಮತ್ತು ಸಂವಿಧಾನವನ್ನು ಉಲ್ಲಂಘಿಸಿ ರಾಜ್ಯ ವಿಭಜನೆಗೆ ಮುಂದಾಗಿದ್ದು, ಕೇಂದ್ರದ ಈ ನಿರ್ಧಾರವನ್ನು ತಾವು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.
ಆಂಧ್ರಪ್ರದೇಶದ ಬಹುಪಾಲು ಜನತೆ ರಾಜ್ಯ ವಿಭಜನೆಯನ್ನು ವಿರೋಧಿಸಿದ್ದಾರೆ. ಹೀಗಾಗಿ ವಿಧಾನಸಭೆಯಲ್ಲಿ ಪ್ರತ್ಯೇಕ ರಾಜ್ಯ ಮಸೂದೆಗೆ ಸೋಲಾಗಲಿದೆ ಎಂದು ರಾಜಗೋಪಾಲ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.