ಜಿಯಾ ಆತ್ಮಹತ್ಯೆ: ಹೈಕೋರ್ಟ್ ಮೆಟ್ಟಿಲೇರಿದ ತಾಯಿ
ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದೊಂದು ಪೂರ್ವ ನಿಯೋಜಿತ ಕೊಲೆ ಎಂದು ಆರೋಪಿಸಿ ಜಿಯಾ ಖಾನ್...
ನವದೆಹಲಿ: ಬಾಲಿವುಡ್ ನಟಿ ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಇದೊಂದು ಪೂರ್ವ ನಿಯೋಜಿತ ಕೊಲೆ ಎಂದು ಆರೋಪಿಸಿ ಜಿಯಾ ಖಾನ್ ತಾಯಿ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆಕೆಯನ್ನು ಕೊಲೆ ಮಾಡಲಾಗಿದೆ ಇದು ಖಚಿತ ಎಂದು ಹೇಳಿರುವ ಜಿಯಾ ತಾಯಿ ರಬ್ಬಿಯಾ ಖಾನ್, ಇಂದು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಜಿಯಾರನ್ನು ಕೊಲೆ ಮಾಡಿರುವುದಕ್ಕೆ ಬಲವಾದ ಕಾರಣ ಇದ್ದು, ಅದು ಆತ್ಮಹತ್ಯೆಯಲ್ಲ ಕೊಲೆ ಎಂದು ದೂರಿದ್ದಾರೆ. ಇದೇ ವೇಳೆ, ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರ ಕಾರ್ಯದ ವಿರುದ್ಧ ಸಹ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಯಾ ಬಾಯ್ಫ್ರೆಂಡ್ ಸೂರಜ್ನನ್ನು ಆತ್ಮಹತ್ಯೆಗೆ ಪ್ರಚೋಧನೆ ನೀಡಿದ ಆರೋಪದ ಮೇಲೆ ಬಂಧಿಸಿ, ನಂತರ 21 ದಿನಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ನಟಿ ಜಿಯಾ ಖಾನ್ ಅವರು ಜೂನ್ 3ರಂದು ತನ್ನ ಸ್ವಾಗತ್ ಅಪಾರ್ಟ್ಮೆಂಟ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗು ಮುನ್ನ ಜಿಯಾ 6 ಪುಟದ ಪತ್ರವನ್ನು ಬರೆದಿದ್ದಳು. ಅದರಲ್ಲಿ ತನ್ನ ಬಾಯ್ಫ್ರೆಂಡ್ ಸೂರಜ್ ಪಂಚೋಲಿ ತನಗೆ ಮೋಸ ಮಾಡಿದ್ದಾನೆ. ನನ್ನನ್ನು ನಂಬಿಸಿ ದೈಹಿಕವಾಗಿ ಬಳಸಿಕೊಂಡು ನನಗೆ ವಂಚಿಸಿದ್ದ ಎಂದು ಬರೆದಿದ್ದಳು.
ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ನಿಶಬ್ಧ ಚಿತ್ರದಲ್ಲಿ ಬಾಲಿವುಡ್ ಸೂಪರ್ಸ್ಟಾರ್ ಅಮಿತಾಬ್ ಬಚ್ಚನ್ ಅವರೊಂದಿಗೆ ಜಿಯಾ ನಟಿಸಿದ್ದರು. ಅನಂತರ ಗಜನಿ ಚಿತ್ರದಲ್ಲಿ ಅಮೀರ್ ಖಾನ್ ಜತೆ ಮತ್ತು ಹೌಸ್ಫುಲ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಜತೆ ನಟಿಸಿದ್ದರು.