ಬೀದರ್‌ನಲ್ಲಿ ಬಿಜೆಪಿ ನಂಗನಾಚ್: ತನಿಖೆಗೆ ಉಮಾಶ್ರೀ ಆದೇಶ
ಕಳೆದ ಒಂದು ತಿಂಗಳ ಹಿಂದೆ ಬೀದರ್‌ನ ಹೊರವಲಯದಲ್ಲಿ ನಡೆದಿದೆ ಎನ್ನಲಾಗುತ್ತಿರುವ 'ನಗ್ನ ನೃತ್ಯ'ದ ಬಗ್ಗೆ ಶುಕ್ರವಾರ ರಾಜ್ಯ ಸರ್ಕಾರ...
ಬೆಂಗಳೂರು: ಕಳೆದ ಒಂದು ತಿಂಗಳ ಹಿಂದೆ ಬೀದರ್‌ನ ಹೊರವಲಯದಲ್ಲಿ ನಡೆದಿದೆ ಎನ್ನಲಾಗುತ್ತಿರುವ 'ನಗ್ನ ನೃತ್ಯ'ದ ಬಗ್ಗೆ ಶುಕ್ರವಾರ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ.
ಕೆಲವು ಬಿಜೆಪಿ ಜಿಲ್ಲಾ ನಾಯಕರ ಸಮ್ಮುಖದಲ್ಲೇ ನಡೆದ ನಗ್ನ ನೃತ್ಯದ ದೃಶ್ಯಗಳು ಇಂದು ಬೆಳಗ್ಗೆಯಿಂದ ಟಿವಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಮಾಶ್ರೀ ಅವರು, ಆ ಬಗ್ಗೆ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಅಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.
ಈ ಘಟನೆ ನಿಜಕ್ಕೂ ಅಸಹ್ಯಕರ, ಅದರಲ್ಲೂ ರಾಜಕಾರಣಿಗಳು ಇದರಲ್ಲಿ ಭಾಗಿಯಾಗಿರವುದು ತಲೆತಗ್ಗಿಸುವಂತಾಗಿದೆ. ವಿಕೃತ ಮನಸ್ಸಿನ ಈ ರಾಜಕಾರಣಿಗಳು ಮನುಷ್ಯರೇ ಅಲ್ಲ ಎಂದು ಕಿಡಿಕಾರಿದ್ದಾರೆ. ಅಲ್ಲದೆ ಅವರು ಯಾವುದೇ ಪಕ್ಷದವರೇ ಆಗಿದ್ದರು ಕಠಿಣ ಕ್ರಮ ತಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿರುವುದಾಗಿ ಉಮಾಶ್ರೀ ಹೇಳಿದ್ದಾರೆ.
ಬೀದರ್ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ಅವರೇ ಸ್ವತಹ ಈ ನಂಗನಾಚ್ ಕಾರ್ಯಕ್ರಮವನ್ನು ಆಯೋಜಿಸಿದ್ದರು ಎನ್ನಲಾಗಿದೆ. ಅಲ್ಲದೆ ಈ ನಂಗನಾಚ್‌ನಲ್ಲಿ ಬೀದರ್ ಜಿಲ್ಲಾ ಬಿಜೆಪಿ ಉಪಾಧ್ಯಾಕ್ಷ ಬಿ.ಎಸ್.ಕುದುರೆ ಹಾಗೂ ಡಿಸಿಸಿ ಬ್ಯಾಂಕ್‌ನ ಮಾಜಿ ಎಂಡಿ ಪತ್ರಿ ಅವರು ಸೇರಿದಂತೆ ಹಲವು ಮಹಿಳೆಯರು ಸಹ ಭಾಗಿಯಾಗಿರುವುದು ದೃಶ್ಯಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಆದರೆ ದೃಶ್ಯಗಳಲ್ಲಿರುವುದು ತಾವು ಅಲ್ಲವೇ ಅಲ್ಲ ಎಂದು ಈ ಮೂವರು ನಾಯಕರು ಹೇಳಿದ್ದಾರೆ.