ಆಂಧ್ರ: ಉಗ್ರರೊಂದಿಗೆ ಗುಂಡಿನ ಚಕಮಕಿ, ಪೊಲೀಸ್ ಅಧಿಕಾರಿ ಸಾವು
ಇಲ್ಲಿನ ಚಿತ್ತೂರು ಬಳಿಯ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಶಂಕಿತ ಉಗ್ರರ ಮೇಲೆ ಪೊಲೀಸರು ಶನಿವಾರ ಗುಂಡಿನ ದಾಳಿ ನಡೆಸಿದ್ದು...
ಚಿತ್ತೂರು: ಇಲ್ಲಿನ ಚಿತ್ತೂರು ಬಳಿಯ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಶಂಕಿತ ಉಗ್ರರ ಮೇಲೆ ಪೊಲೀಸರು ಶನಿವಾರ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿ ದಾಳಿ ನಡೆಸಿದ ಉಗ್ರರು ಓರ್ವ ಪೊಲೀಸ್ ಇನ್‌ಸ್ಪೆಕ್ಟರನ್ನು ಹತ್ಯೆ ಮಾಡಿದ್ದಾರೆ.
ಜುಲೈ 19ರಂದು ತಮಿಳುನಾಡಿನ ಸೇಲಂನಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಮೇಶ್‌ರನ್ನು ಹತ್ಯೆ ಮಾಡಿದ್ದ ಈ ಶಂಕಿತ ಉಗ್ರರು, ಆಂಧ್ರ ಪದ್ರೇಶದ ಚಿತ್ತೂರಿನಲ್ಲಿ ಅಡಗಿ ಕುಳಿತಿದ್ದಾರೆ ಎಂಬ ಖಚಿತ ಮಾಹಿತಿ ಪಡೆದ ತಮಿಳುನಾಡು ಪೊಲೀಸರು, ಆಂಧ್ರಪ್ರದೇಶ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ಕೈಗೊಂಡು ಉಗ್ರರು ಅಡಗುತಾಣದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಘಟನಾ ಸ್ಧಳದಲ್ಲಿ ನೂರಾರು ಪೊಲೀಸರು ಬೀಡು ಬಿಟ್ಟಿದ್ದು, ಮನೆಯಲ್ಲಿ ಅಡಗಿ ಕುಳಿತಿರುವ ಉಗ್ರರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದಾರೆ. ಇದೇ ವೇಳೆ ಉಗ್ರರು ಸಹ ಪೊಲೀಸರ ಮೇಲೆ ಪ್ರತಿ ದಾಳಿ ನಡೆಸಿದ್ದರಿಂದ ತಮಿಳುನಾಡಿನ ಸರ್ಕಲ್ ಇನ್‌ಸ್ಪೆಕ್ಟರ್ ರಮೇಶ್ ಎಂಬುವರು ಮೃತಪಟ್ಟಿದ್ದಾರೆ. ಈ ವೇಳೆ ಘಟನೆಯಲ್ಲಿ ಮೂವರು ಪೊಲೀಸರು ಸಹ ತೀವ್ರವಾಗಿ ಗಾಯಗೊಂಡಿದ್ದಾರೆ.
ಕಾರ್ಯಾಚರಣೆ ವೇಳೆ ಅಲ್ ಮುಜಾಯಿದ್ದಿನ್ ಉಗ್ರ ಸಂಘಟನೆಗೆ ಸೇರಿದ ಉಗ್ರ ಫಕ್ರುದ್ದೀನ್ ಮತ್ತು ಬಿಲಾಲ್‌ನನ್ನು ಬಂಧಿಸಲಾಗಿದೆ. ಅಲ್ಲದೆ ಮನೆಯಲ್ಲಿ ಇನ್ನು ಇಬ್ಬರು ಉಗ್ರರಾದ ಅಬು ಬೇಕರ್ ಸಿದ್ದಿಕ್, ಫನ್ನಾ ಇಸ್ಮಾಹಿಲ್ ಎಂಬುವರು ಅಡಗಿ ಕುಳಿತಿದ್ದು ಅಲ್ಲಿಂದಲೇ ಗುಂಡಿನ ದಾಳಿ ನಡೆಸುತ್ತಿದ್ದಾರೆ.
ಉಗ್ರರು ಸಹ ಎಕೆ 47 ಮತ್ತು ಗ್ರೈನೇಡ್‌ಗಳನ್ನು ಹೊಂದಿದ್ದು, ಗ್ರೈನೇಡ್‌ಗಳನ್ನು ಸ್ಫೋಟಿಸಿ ಹೆಚ್ಚಿನ ಹಾನಿ ಮಾಡುವ ಆತಂಕ ಉಂಟಾಗಿರುವುದರಿಂದ ಪೊಲೀಸರು ಹೆಚ್ಚು ಜಾಗರುಕತೆಯಿಂದ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸದ್ಯ ಉಗ್ರರ ಮತ್ತು ಪೊಲೀಸರ ನಡುವೆ ನಿರಂತರವಾಗಿ ಗುಂಡಿನ ಚಕಮಿಕಿ ನಡೆದಿದೆ. ಸ್ಥಳಕ್ಕೆ ವಿಶೇಷ ಭದ್ರತಾ ಪಡೆ ಸಿಬ್ಬಂದಿಗಳು ಧಾವಿಸಿದ್ದಾರೆ.
ಮಲ್ಲೇಶ್ವರಂ ಸ್ಫೋಟದಲ್ಲಿ ಬಿಲಾಲ್ ಪಾತ್ರ
ಈ ಮಧ್ಯೆ, ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯ ಮುಂದೆ ನಡೆದ ಬಾಂಬ್ ಸ್ಫೋಟದಲ್ಲಿ ಬಂಧಿತ ಅಲ್ ಮುಜಾಯಿದ್ದಿನ್ ಉಗ್ರ ಸಂಘಟನೆಗೆ ಸೇರಿದ ಉಗ್ರ ಬಿಲಾಲ್ ಮಲ್ಲಿಕ್‌ನ ಕೈವಾಡವಿದೆ ಎಂದು ಬೆಂಗಳೂರು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯನ್ನು ಗುರಿಯಾಗಿರಿಸಿಕೊಂಡಿರುವ ಉಗ್ರರು ಬಿಜೆಪಿ ನಾಯಕರ ಹಾಗೂ ಬಿಜೆಪಿ ಕಚೇರಿಗಳ ಮೇಲೆ ದಾಳಿಗಳನ್ನು ನಡೆಸಿದ್ದಾರೆ. ಅಲ್ಲದೆ ಬಿಜೆಪಿ ಹಿರಿಯ ಮುಂಖಡ ಎಲ್.ಕೆ. ಆಡ್ವಾಣಿ ಅವರು ಕೈಗೊಂಡಿದ್ದ ರಥ ಯಾತ್ರೆಗೂ ಬಾಂಬ್ ಇಡುವ ಸಂಚು ರೂಪಿಸಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.