ಅಕ್ರಮ ಆಸ್ತಿಗಳಿಕೆ: ಮಾಯಾವತಿ ವಿರುದ್ಧ ತನಿಖೆ ಕೈಬಿಡಲು ಸಿಬಿಐ ಸಿದ್ಧ
ನವದೆಹಲಿ: ಅಕ್ರಮ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿರುವ ಬಹುಜನ ಸಮಾಜ ಪಕ್ಷದ(ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ವಿರುದ್ಧದ ತನಿಖೆ ಕೈ ಬಿಡಲು ಸಿಬಿಐ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮಾಯಾವತಿ ವಿರುದ್ಧದ ಅಕ್ರಮ ಆಸ್ತಿ ಪ್ರಕರಣ ಸಂಬಂಧ ತನಿಖಾ ಅಧಿಕಾರಿಗಳು ಸಲ್ಲಿಸಿದ್ದ ಎಫ್‌ಐಆರ್ ಅನ್ನು ಸುಪ್ರೀಂಕೋರ್ಟ್ ಕಳೆದ ವರ್ಷ ರದ್ದು ಮಾಡಿತ್ತು. ಇದೇ ವೇಳೆ ವೈಯಕ್ತಿಕ ಅರ್ಜಿಯೊಂದು ದಾಖಲಾಗಿದ್ದರಿಂದ ಪ್ರಕರಣವನ್ನು ಮುಂದುವರೆಸಬೇಕಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿತ್ತು. ಈ ಸಂಬಂಧ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಕಾನೂನು ಅಭಿಪ್ರಾಯಗಳನ್ನು ಪಡೆದ ಬಳಿಕ ಪ್ರಕರಣದ ತನಿಖೆ ಅಂತ್ಯಗೊಳಿಸಲು ಸಿಬಿಐ ನಿರ್ಧರಿಸಿದೆ.
ಕಳೆದ ಆಗಸ್ಟ್ 8 ರಂದು ಮಾಯಾವತಿ ವಿರುದ್ಧದ ಅಕ್ರಮ ಆಸ್ತಿಗಳಿಕೆ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಅರ್ಜಿಯನ್ನು ವಜಾಗೊಳಿಸುವ ಮೂಲಕ ಸಿಬಿಐಗೆ ತನಿಖೆಯನ್ನು ಮುಕ್ತಾಯಗೊಳಿಸಲು ದಾರಿ ಒದಗಿಸಿದೆ ಎಂದು ಮೂಲಗಳು ಹೇಳಿವೆ.
ಸಮಾಜವಾದಿ ಪಕ್ಷ(ಎಸ್‌ಪಿ) ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಮೇಲಿದ್ದ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧ ಸೂಕ್ತ ಸಾಕ್ಷ್ಯಧಾರಗಳು ಸಿಗದ ಹಿನ್ನೆಲೆಯಲ್ಲಿ ಈ ಮುಂಚೆ ಮುಲಾಯಂ ಮತ್ತು ಅವರ ಪುತ್ರ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ವಿರುದ್ಧದ ತನಿಖೆಯನ್ನು ಕೈ ಬಿಡಲಾಗಿತ್ತು. ಇದರ ಬೆನ್ನಲ್ಲೇ ಮಾಯಾವತಿ ವಿರುದ್ಧದ ಪ್ರಕರಣವನ್ನು ಕೈಬಿಡುವ ಮೂಲಕ ಈ ಇಬ್ಬರು ರಾಜಕಾರಣಿಗಳಿಗೆ ಪ್ರಕರಣದಿಂದ ಕ್ಲೀನ್ ಚಿಟ್ ನೀಡಿದೆ.