ಕೇರನ್ ಕಾರ್ಯಾಚರಣೆ ಅಂತ್ಯ: ಪಾಕ್ ಕೈವಾಡ, ಸೇನೆ ಸ್ಪಷ್ಟನೆ
ಜಮ್ಮು ಮತ್ತು ಕಾಶ್ಮೀರದ ಗಡಿಭಾಗದಲ್ಲಿರುವ ಕೇರನ್ ಸೆಕ್ಟರ್ ಬಳಿ ನಿರಂತರವಾಗಿ ನಡೆಯುತ್ತಿದ್ದ ಒಳನುಸುಳುಕೋರರ ವಿರುದ್ಧದ...
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿಭಾಗದಲ್ಲಿರುವ ಕೇರನ್ ಸೆಕ್ಟರ್ ಬಳಿ ನಿರಂತರವಾಗಿ ನಡೆಯುತ್ತಿದ್ದ ಒಳನುಸುಳುಕೋರರ ವಿರುದ್ಧದ ಕಾರ್ಯಾಚರಣೆ ಅಂತ್ಯಗೊಂಡಿದೆ ಎಂದು ಸೇನಾ ಅಧಿಕಾರಿಗಳು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಸಂಜೀವ್ ಚಾರ್ಚಾ ಅವರು, ಕಳೆದ 15 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದ ಒಳನುಸುಳುಕೋರರ ವಿರುದ್ಧದ ಕಾರ್ಯಾಚರಣೆ ಇಂದು ಮುಕ್ತಾಯಗೊಂಡಿದೆ. ಕಾರ್ಯಾಚರಣೆಯಲ್ಲಿ ಸುಮಾರು 7 ಉಗ್ರರ ಬಲಿಯಾಗಿದ್ದು, ಅವರ ಮೃತದೇಹಗನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ ಅವರು ಬಳಸುತ್ತಿದ್ದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. ಅಲ್ಲದೆ ಭಾರತದ ಗಡಿ ಒಳಗೆ ನುಸುಳಲು ಉಗ್ರರಿಗೆ ಪಾಕಿಸ್ತಾನ ಸೈನಿಕರು ಸಹಕರಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸೆಪ್ಟಂಬರ್ 24ರಂದು ಗಡಿಭಾಗದಲ್ಲಿರುವ ಕುಪ್‌ವಾರ ಜಿಲ್ಲೆಯ ಶಲ್ಭಾತಿ ಹಳ್ಳಿಯನ್ನು ಆಕ್ರಮಿಸಿಕೊಂಡಿದ್ದ 30ರಿಂದ 40 ಮಂದಿ ಒಳನುಸುಳುಕೋರರು ಸೇನೆ ವಿರುದ್ಧ ದಾಳಿಗೆ ಮುಂದಾಗಿದ್ದರು. ಇದೇ ವೇಳೆ ಒಳನುಸುಳುಕೋರರ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಕೈಗೊಂಡ ಭಾರತೀಯ ಯೋಧರು ನಿರಂತರವಾಗಿ 15 ದಿನಗಳಿಂದ ಗುಂಡಿನ ದಾಳಿ ನಡೆಸಿದ್ದರು. ಉಗ್ರರ ವಿರುದ್ಧದ ಕಾರ್ಯಾಚರಣೆ ಯಶಸ್ವಿಯಾಗಿದ್ದು ದಾಳಿಯಲ್ಲಿ 7 ಉಗ್ರರು ಬಲಿಯಾಗಿದ್ದಾರೆ.
ಇದೇ ವೇಳೆ, ಒಳನುಸುಳುಕೋರರಿಗೆ ಪಾಕಿಸ್ತಾನ ಸೈನಿಕರು ಸಹಾಯ ಮಾಡಿದ್ದಾರೆ. ಪಾಕ್ ಸೈನಿಕರ ನೆರವಿಲ್ಲದೆ ಭಾರತದ ಗಡಿಯೊಳಗೆ ನುಸುಳಲು ಸಾಧ್ಯವಿಲ್ಲ. ಅಲ್ಲದೆ ಒಳನುಸುಳುಕಾರರಿಂದ ವಶಪಡಿಸಿಕೊಂಡಿರುವ ಗುರುತಿನ ಚೀಟಿ ಮತ್ತು ಕೆಲವೊಂದು ಪತ್ರಗಳನ್ನು ಸೇನೆ ವಶಪಡಿಸಿಕೊಂಡಿದ್ದು, ಅದನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.
ದಾಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಸೇನಾ ಮುಖ್ಯಸ್ಥ ಜನರಲ್ ಬಿಕ್ರಂ ಸಿಂಗ್, ಭಾರತ ಗಡಿಯೊಳಗೆ ನುಸುಳಿದ್ದ ಉಗ್ರರು ಪೂರ್ತಿ ಹಳ್ಳಿಯನ್ನು ಆಕ್ರಮಿಸಿಕೊಂಡಿರಲಿಲ್ಲ ಆದರೆ ಒಂದು ಕಡೆ ಅಡಗಿ ಕುಳಿತು ದಾಳಿ ನಡೆಸುತ್ತಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ. ಸದ್ಯ ಒಳನುಸುಳುಕೋರರನ್ನು ಹಿಮ್ಮೆಟ್ಟಿಸಲಾಗಿದ್ದು, ಪರಿಸ್ಥಿತಿ ತಿಳಿಕೊಂಡಿದೆ. ಮುಂದೆ ಉಗ್ರರು ಒಳನುಸುಳದಂತೆ ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.