ಶಾಸಕ ಆನಂದ್ ಸಿಂಗ್ ಬಂಧನಕ್ಕೆ ಸಿಬಿಐ ಬಲೆ
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ಆರೋಪಿ ವಿಜಯನಗರ ಶಾಸಕ ಆನಂದ್ ಸಿಂಗ್ ಬಂಧನಕ್ಕೆ ಮಂಗಳವಾರ ಸಿಬಿಐ...
ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ಆರೋಪಿ ವಿಜಯನಗರ ಶಾಸಕ ಆನಂದ್ ಸಿಂಗ್ ಬಂಧನಕ್ಕೆ ಮಂಗಳವಾರ ಸಿಬಿಐ ಅಧಿಕಾರಿಗಳು ಬಲೆಬೀಸಿದ್ದಾರೆ.
ಅನಾರೋಗ್ಯದ ನೆಪ ಹೇಳಿ ತಲೆಮರೆಸಿಕೊಂಡು ತಿರುಗುತ್ತಿರುವ ಆನಂದ್ ಸಿಂಗ್ ಅವರು ಸಿಂಗಾಪುರದಲ್ಲಿ ಇಲ್ಲ. ಅವರು ಬೆಂಗಳೂರಿನಲ್ಲೇ ಅಡಗಿರುವ ಕುರಿತು ಮಾಹಿತಿ ಸಂಗ್ರಹಿಸಿರುವ ಸಿಬಿಐ ಅಧಿಕಾರಿಗಳು ಆತನನ್ನು ಬಂಧಿಸಲು ಮುಂದಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಆನಂದ್ ಸಿಂಗ್ ಅವರಿಗೆ ಕೋರ್ಟ್ ಆದೇಶಿಸಿತ್ತು. ಅನಾರೋಗ್ಯದಿಂದ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ನೀಡಿ ಸಿಬಿಐ ಅಧಿಕಾರಿಗಳು ಮುಂದೆ ಹಾಜರಾಗಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ನಿರೀಕ್ಷಣಾ ಜಾಮೀನು ನೀಡುವಂತೆ ಆನಂದ್ ಸಿಂಗ್ ಸಿಬಿಐ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಆನಂದ್ ಸಿಂಗ್ಗೆ ಜಾಮೀನು ನೀಡಿದಂತೆ ಸಿಬಿಐ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ನಿನ್ನೆ ನಿರೀಕ್ಷಣಾ ಅರ್ಜಿಯನ್ನು ವಜಾಗೊಳಿಸಿ ಆನಂದ್ ಸಿಂಗ್ ಬಂಧನಕ್ಕೆ ಆದೇಶಿಸಿತ್ತು. ಅಲ್ಲದೆ ಸಿಂಗ್ ವಿರುದ್ಧ ಲುಕ್ ಔಟ್ ನೋಟೀಸ್ ಹೊರಡಿಸಿತ್ತು.
ಬಂಧನದ ಭೀತಿ ಎದುರಿಸುತ್ತಿರುವ ಆನಂದ್ ಸಿಂಗ್ ಅವರು ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದು, ತಾವಾಗಿಯೇ ಸಿಬಿಐಗೆ ಶರಣಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.