ಸಿಎಂ ವಿರುದ್ಧ ಸಿಡಿದೆದ್ದ ಶಾಸಕರು, ಹೈಕಮಾಂಡ್‌ಗೆ ಪತ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅವರದ್ದೇ ಪಕ್ಷದ ಶಾಸಕರು ಸಿಡಿದೆದ್ದಿದ್ದು, ಸುಮಾರು 25ಕ್ಕು ಹೆಚ್ಚು ಶಾಸಕರು
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅವರದ್ದೇ ಪಕ್ಷದ ಶಾಸಕರು ಸಿಡಿದೆದ್ದಿದ್ದು, ಸುಮಾರು 25ಕ್ಕು ಹೆಚ್ಚು ಶಾಸಕರು ಸಿಎಂ ವಿರುದ್ಧವೇ ಪಕ್ಷದ ಹೈಕಮಾಂಡ್‌ಗೆ ಪತ್ರ ಬರೆಯುವ ಮೂಲಕ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಸಿಎಂ ಸಿದ್ದರಾಮಯ್ಯ ತಮ್ಮ ಬೇಡಿಕೆಗಳಿಗೆ ಮಾನ್ಯೆತೆ ನೀಡುತ್ತಿಲ್ಲ ಎಂದು ಆರೋಪಿಸಿ 25ಕ್ಕು ಹೆಚ್ಚು ಶಾಸಕರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.
ಸಿದ್ದರಾಮಯ್ಯ ಶಾಸಕರನ್ನು ನಿರ್ಲಕ್ಷಿಸುತ್ತಿದ್ದು, ತಮ್ಮ ಆಪ್ತರಾದ ಕೆಂಪಯ್ಯ, ಚೆನ್ನಾ ರೆಡ್ಡಿ, ಕೋಣನಕುಂಟೆ ಲಕ್ಷ್ಮಣ್ ಹಾಗೂ ರವಿ ಭೋಸರಾಜ ಅವರ ಮೂಲಕ ತಮ್ಮ ನಿರ್ಧಾರಗಳನ್ನು ಪ್ರಶ್ನಿಸದಂತೆ ಕ್ರಮ ತೆಗೆದುಕೊಳ್ಳುತ್ತಿದ್ದಾರೆ ಎಂದು ಶಾಸಕರು ಪತ್ರದಲ್ಲಿ ದೂರಿದ್ದಾರೆ.
ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟಕ್ಕೆ ಬಾರದಂತೆ ಸಿಎಂ ತಡೆಯುತ್ತಿದ್ದು, ತಮ್ಮ ಬಗ್ಗೆ ಒಳ್ಳೆಯ ಇಮೇಜ್ ಸೃಷ್ಟಿ ಮಾಡಿಕೊಳ್ಳಲು ಪ್ರಗತಿಪರ ಸಾಹಿತಿಗಳನ್ನು ಅವರು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಕಾಮಗಾರಿ ನಿರ್ವಹಣೆ, ಎನ್‌ಒಸಿ ಪಟ್ಟಿ ನೀಡಿಕೆಯಲ್ಲೂ ತಾರತಮ್ಯ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ಡಿಸಿ, ಎಸಿ, ಆರ್‌ಟಿಓ, ಬಿಡಬ್ಲ್ಯೂಎಸ್‌ಎಸ್‌ಬಿ ಸೇರಿದಂತೆ ಪ್ರಮುಖ ಹುದ್ದೆಗಳ ವರ್ಗಾವಣೆಯನ್ನು ಸಿಎಂ ತಮ್ಮ ಆಪ್ತರಿಗೆ ಬೇಕಾದಂತೆ ಮಾಡುತ್ತಿದ್ದಾರೆ. ಅಧಿಕಾರಿಗಳ ವರ್ಗಾವಣೆಯಲ್ಲೂ ಸಿಎಂ ಆಪ್ತರದ್ದೇ ಕಾರುಬಾರು ಎಂದು ಶಾಸಕರು ಕಿಡಿ ಕಾರಿದ್ದಾರೆ. ಅಕಾಡೆಮಿ ಅಧ್ಯಕ್ಷರ ನೇಮಕದಲ್ಲೂ ಸಿಎಂ ಆಪ್ತರದ್ದೇ ಪ್ರಮುಖ ಪಾತ್ರ ಎಂದು ಶಾಸಕರು ಸಿಎಂ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾರೆ.
ಇನ್ನು ಶಾಸಕರ ಪತ್ರಕ್ಕೆ ಪ್ರತಿಕ್ರಿಯಿಸಿರುವ ದಿಗ್ವಿಜಯ್ ಸಿಂಗ್, ಈ ಕುರಿತು ಶೀಘ್ರದಲ್ಲೇ ಸಮನ್ವಯ ಸಮಿತಿ ಸಭೆ ಕರೆದು ಚರ್ಚಿಸಲಾಗುವುದು. ಅಲ್ಲಿಯವರೆಗೆ ಸಮಾಧಾನದಿಂದ ಇರುವಂತೆ ಶಾಸಕರಿಗೆ ಸೂಚಿಸಿದ್ದಾರೆ.
ಶಾಸಕರ ಪತ್ರದ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ: ಸಿಎಂ
ಈ ಬಗ್ಗೆ ಹಾಸನದಲ್ಲಿ ವರದಿಗಾರರಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ತಮ್ಮ ವಿರುದ್ಧ 25ಕ್ಕು ಹೆಚ್ಚು ಶಾಸಕರು ಕಾಂಗ್ರೆಸ್ ಹೈಕಮಾಂಡ್‌ಗೆ ಪತ್ರ ಬರೆದಿರುವ ಬಗ್ಗೆ ತಮಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ ಈ ಕುರಿತು ಮಾಧ್ಯಮಗಳಲ್ಲಿ ಬರುತ್ತಿರುವುದೆಲ್ಲ ಸುಳ್ಳು ಎಂದಿದ್ದಾರೆ.