ಆಜೀವ ನಿಷೇಧ ಹೇರುವುದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಜ್ವಾಲಾ
ನವದೆಹಲಿ: ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಆಜೀವ ನಿಷೇಧ ಹೇರುವ ಹಿನ್ನೆಲೆಯಲ್ಲಿ ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಅವರು ಭಾರತೀಯ ಬ್ಯಾಡ್ಮಿಂಟನ್ ಸಂಸ್ಧೆ(ಬಿಎಐ) ವಿರುದ್ಧ ಬುಧವಾರ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ನಲ್ಲಿ(ಐಬಿಎಲ್) ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕಾಗಿ ಆಜೀವ ನಿಷೇಧಕ್ಕೆ ಶಿಸ್ತು ಸಮಿತಿ ಶಿಫಾರಸ್ಸು ಮಾಡಿದ ಬೆನ್ನಲ್ಲೇ, ಈ ಸಂಬಂಧ ನಾವು ಕಾನೂನು ಕ್ರಮದ ಮೂಲಕ ಹೋರಾಡಲು ನಿರ್ಧರಿಸಿದ್ದು, ಹೀಗಾಗಿ ದೆಹಲಿ ಹೈಕೋರ್ಟ್ನಲ್ಲಿ ಇಂದು ಅರ್ಜಿ ಸಲ್ಲಿಸಿದ್ದೇವೆ ಎಂದು ಜ್ವಾಲಾ ಅವರು ತಂದೆ ಕ್ರಾಂತಿ ಗುಟ್ಟಾ ತಿಳಿಸಿದ್ದಾರೆ.
ಮುಂದಿನ ಒಂದು ತಿಂಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಟೂರ್ನಿಗೆ ಆಯ್ಕೆ ಮಾಡುವ ವೇಳೆ ಜ್ವಾಲಾ ಅವರನ್ನು ಪರಿಗಣಿಸುವುದನ್ನು ಬಿಎಐ ತಳ್ಳಿ ಹಾಕಿದ್ದು, ಈ ಸಂಬಂಧ ತನಿಖೆಗೆ ಅಧ್ಯಕ್ಷ ಅಖಿಲೇಶ್ ದಾಸ್ ಗುಪ್ತಾ ಅವರು ಸೋಮವಾರ ರಚಿಸಿದ್ದ ತ್ರಿಸದಸ್ಯ ಸಮಿತಿ ನಿರ್ಧಾರ ಕೈಗೊಳ್ಳಬೇಕಿದೆ. ಇದರ ಪರಿಣಾಮವಾಗಿ ಮುಂಬರುವ ಡೆನ್ಮಾರ್ಕ್ ಹಾಗೂ ಫ್ರೆಂಚ್ ಓಪನ್ ಟೂರ್ನಿಗಳಿಂದ ಜ್ವಾಲಾ ಹೊರಗುಳಿಯುವಂತಾಗಿದೆ.