ಕಾಂಗ್ರೆಸ್ ದಲಿತ ವಿರೋಧಿ: ಮಾಯಾ
ದಲಿತರನ್ನು ಶೋಷಿಸುತ್ತಿರುವವರು ನಾವಲ್ಲ, ಅದು ಕಾಂಗ್ರೆಸ್ ಎಂದು ಬಹುಜನ ಸಮಾಜ ಪಕ್ಷ(ಬಿಎಸ್ಪಿ)ದ ಮುಖ್ಯಸ್ಥೆ ಮಾಯಾವತಿ ಕಾಂಗ್ರೆಸ್...
ಲಖನೌ: ದಲಿತರನ್ನು ಶೋಷಿಸುತ್ತಿರುವವರು ನಾವಲ್ಲ, ಅದು ಕಾಂಗ್ರೆಸ್ ಎಂದು ಬಹುಜನ ಸಮಾಜ ಪಕ್ಷ(ಬಿಎಸ್ಪಿ)ದ ಮುಖ್ಯಸ್ಥೆ ಮಾಯಾವತಿ ಕಾಂಗ್ರೆಸ್ ವಿರುದ್ಧ ಬುಧವಾರ ಕಿಡಿಕಾರಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತರನ್ನು ಶೋಷಿಸುತ್ತಿರುವವರು ಕಾಂಗ್ರೆಸ್ಸಿಗರು ಎಂದು ಹೇಳುವ ಮೂಲಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ದೇಶದಲ್ಲಿ ದಲಿತ ಪರ ಹೆಚ್ಚು ಕಾಳಜಿ ಹೊಂದಿರುವುದಾಗಿ ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ದಲಿತ ಉದ್ಧಾರಕ್ಕಾಗಿ ಯಾವುದೇ ಕಲ್ಯಾಣ ಕಾರ್ಯಗಳನ್ನು ಮಾಡಿಲ್ಲ ಎಂದರು. ಸುಮ್ಮನೆ ದಲಿತರ ರಕ್ಷಣೆಗೆ ನಿಂತಿರುವುದಾಗಿ ಹೇಳಿ ಕಾಂಗ್ರೆಸ್ ದಲಿತರನ್ನು ಹೆಚ್ಚಾಗಿ ಶೋಷಣೆ ಮಾಡುತ್ತಿದೆ ಎಂದರು.
ಕಾಂಗ್ರೆಸ್ಗೆ ದಲಿತರ ಪರ ಕಾಳಜಿ ಇದ್ದಿದ್ದೇ ಆದರೆ, ದಲಿತ ಹೋರಾಟಗಾರ ಬಿಎಸ್ಪಿ ಸಂಸ್ಥಾಪಕ ಕಾನ್ಷಿರಾಮ್ ಅವರ ಪುಣ್ಯತಿಥಿಯನ್ನ ರಾಷ್ಟ್ರೀಯ ಸಂತಾಪ ಸೂಚಕ ದಿನವಾಗಿ ಏಕೆ ಘೋಷಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನು ನೋಡಿದರೆ ಕಾಂಗ್ರೆಸ್ ದಲಿತರ ಪರ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
ನಿನ್ನೆಯಷ್ಟೇ ಉತ್ತರ ಪ್ರದೇಶದಲ್ಲಿ ನಡೆದ ಪರಿಶಿಷ್ಟ ಜಾತಿಗಳ ಸಬಲೀಕರಣ ಕುರಿತ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು, ಈ ಹಿಂದೆ ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಾಗಿ ರಾಜ್ಯಭಾರ ಮಾಡಿದ್ದ ದಲಿತ ನಾಯಕಿ ಮಾಯಾವತಿಯವರು ದಲಿತರ ಉದ್ಧಾರಕ್ಕಾಗಿ ಏನು ಮಾಡಿದ್ದಾರೆ. ದಲಿತ ನಾಯಕಿ ಎಂದು ಹೇಳಿಕೊಂಡು ದಲಿತರ ಶೋಷಣೆ ಮಾಡಿದ್ದಾರೆ ಎಂದು ಆರೋಪಿಸಿದ್ದರು.