ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮುಜಾಫರ್‌ನಗರ ಗಲಭೆಗೆ ರಾಜಕಾರಣಿಗಳೆ ಕಾರಣ: ರಾಹುಲ್

ಮುಜಾಫರ್‌ನಗರ ಕೋಮುಗಲಭೆಗೆ ರಾಜಕೀಯ ಪಕ್ಷಗಳ ಪಿತೂರಿಯೇ ಕಾರಣ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ...

Vishwanath S
Updated On : 9 Oct 2013, 4:34 am

ಅಲಿಗಡ್: ಮುಜಾಫರ್‌ನಗರ ಕೋಮುಗಲಭೆಗೆ ರಾಜಕೀಯ ಪಕ್ಷಗಳ ಪಿತೂರಿಯೇ ಕಾರಣ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಆರೋಪಿಸಿದ್ದಾರೆ.

ಇಂದು ಪಶ್ಚಿಮ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಜಾಫರ್‌ನಗರದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಲು ರಾಜಕಾರಣಿಗಳೆ ಕಾರಣ ಎಂದು ಹರಿಹಾಯ್ದರು. ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರಿಂದ ಸಮರ್ಥ ಆಡಳಿತ ನೀಡಲು ಸಾಧ್ಯವಾಗಿಲ್ಲ. ಗಲಭೆ ಸಮಯದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿ ಸರ್ಕಾರ ಸೋತಿದೆ ಎಂದರು. ಜನರಿಗೆ ಕೇವಲ ಲ್ಯಾಪ್‌ಟಾಪ್‌ಗಳನ್ನು ನೀಡುವ ಆಮಿಷಗಳನ್ನು ನೀಡುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಗಲಭೆಗಳನ್ನು ಸೃಷ್ಟಿಸುವ ಮೂಲಕ ಹಿಂದು-ಮುಸ್ಲಿಂರ ನಡುವೆ ಬಿರುಕು ಮೂಡಿಸಿ ಚುನಾವಣೆಯಲ್ಲಿ ಗೆಲ್ಲವಂತ ಹೀನ ಕೃತ್ಯಕ್ಕೆ ರಾಜಕಾರಣಿಗಳು ಮುಂದಾಗುತ್ತಿದ್ದಾರೆ ಎಂದು ಆರೋಪಿಸಿದರು.

ಮುಜಾಫರ್‌ನಗರದ ನಿವಾಸಿಗಳನ್ನು ಮಾತನಾಡಿಸಿದಾಗ ನನಗೆ ತಿಳಿದಂತ ವಿಷಯವೆಂದರೆ. ಮುಜಾಫರ್‌ನಗರದಲ್ಲಿನ ಹಿಂದು-ಮುಸ್ಲಿಂರು ಸೌಹಾರ್ದತೆಯಿಂದ ಬಾಳುತ್ತಿದ್ದು, ನಮ್ಮಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಇಲ್ಲ. ಆದರೆ ರಾಜಕಾರಣಿಗಳು ನಮ್ಮಲ್ಲಿ ಒಡಕು ಮೂಡಿಸಲು ಯತ್ನಿಸುತ್ತಿದ್ದಾರೆ ಎಂದು ಸ್ಥಳೀಯರು ತಮ್ಮ ಕಷ್ಟವನ್ನು ತೊಡಿಕೊಂಡಿದ್ದಾರೆ ಎಂದರು.

ರಾಜ್ಯದಲ್ಲಿ ಕೋಮು ಗಲಭೆಗಳಂತಹ ಪರಿಸ್ಥಿತಿಯನ್ನು ಸೃಷ್ಟಿಸಿದಾಗ ಮಾತ್ರ ತಾವು ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗುತ್ತದೆ ಎಂದು ಕೆಲ ರಾಜಕಾರಣಿಗಳು ತೀರ್ಮಾನಿಸಿದ್ದು, ಈ ಕಾರಣಕ್ಕಾಗಿಯೇ ಗಲಭೆಗಳನ್ನು ಸೃಷ್ಟಿ ಮಾಡುತ್ತಿದ್ದಾರೆ. ಕೇವಲ ಓಟ್‌ಬ್ಯಾಂಕ್ ರಾಜಕಾರಣ ನಡೆಸಲು ರಾಜಕಾರಣಿಗಳು ನಿರತರಾಗಿದ್ದಾರೆ ಎಂದು ದೂಷಿಸಿದರು.

ಜನಾಂಗಗಳ ನಡುವೆ ಏಕತೆ ಇರದ ಕಾರಣ ಉತ್ತರ ಪ್ರದೇಶ ಇನ್ನು ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿಲ್ಲ. ಎಸ್‌ಪಿ ಮತ್ತು ಬಿಎಸ್‌ಪಿ ಎರಡು ಪಕ್ಷಗಳು ಉತ್ತರ ಪ್ರದೇಶವನ್ನು ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿವೆ. ಹೀಗಾಗಿ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತನ್ನಿ ಎಂದು ರಾಹುಲ್ ಕಾರ್ಯಕರ್ತರಿಗೆ ಕರೆ ನೀಡಿದರು.

ಗಲಭೆಗಳ ಸಂದರ್ಭಗಳಲ್ಲಿ ಯಾವುದೇ ರಾಜಕಾರಣಿ ಸತ್ತ ನಿದರ್ಶನಗಳಿಲ್ಲ. ಕೇವಲ ಸಾಮಾನ್ಯ ಜನರು ಮಾತ್ರ ಇಂತಹ ದುಷ್ಕೃತ್ಯಕ್ಕೆ ಬಲಿಯಾಗುತ್ತಿದ್ದಾರೆ. ರಾಜಕಾರಣಿಗಳು ಕೇವಲ ಜನರಲ್ಲಿ ಕಿಚ್ಚು ಹಚ್ಚಿ ತಮ್ಮ ಬೆಳೆ ಬೆಯಿಸಿಕೊಳ್ಳುವ ಕುತಂತ್ರ ರಾಜಕಾರಣ ನಡೆಸುತ್ತಿದ್ದಾರೆ ಎಂದು ದೂರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement