ಪ್ರಾಂಶುಪಾಲರನ್ನೇ ಹತ್ಯೆ ಮಾಡಿದ ವಿದ್ಯಾರ್ಥಿಗಳು
ಟುಟಿಕೋರಿನ್ ನಗರದ ಇನ್ಫಾಂಟ್ ಜೀಸಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರನ್ನು ವಿಧ್ಯಾರ್ಥಿಗಳೆ ಮಾರಕಾಸ್ತ್ರಗಳಿಂದ...
ತಿರುನಲ್‌ವೇಲಿ: ಟುಟಿಕೋರಿನ್ ನಗರದ ಇನ್ಫಾಂಟ್ ಜೀಸಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರನ್ನು ವಿಧ್ಯಾರ್ಥಿಗಳೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಗುರುವಾರ ವರದಿಯಾಗಿದೆ.
ಇಂದು ಬೆಳಿಗ್ಗೆ ಕಾಲೇಜಿನ ಪ್ರಾಂಶುಪಾಲರ ಕಚೇರಿಗೆ ನುಗ್ಗಿದ್ದ ಮೂವರು ವಿದ್ಯಾರ್ಥಿಗಳು ಪ್ರಾಂಶುಪಾಲ ಸುರೇಶ್ (55)ರನ್ನು ಕಚೇರಿಯಿಂದ ಹೊರಗೆಳೆದು ಬರ್ಬರವಾಗಿ ಕೊಚ್ಚಿ ಹಾಕಿದ್ದಾರೆ. ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಸುರೇಶ್ ಅವರನ್ನು ಕೂಡಲೆ ಸ್ಥಳೀಯ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆ ಅಸುನಿಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರ್ಯಾಗಿಂಗ್ ಮತ್ತು ಅಸಭ್ಯ ವರ್ತನೆಗಾಗಿ ಪ್ರಾಂಶುಪಾಲರು ಈ ಮೂವರು ವಿದ್ಯಾರ್ಥಿಗಳನ್ನು ಹಾಸ್ಟಲ್‌ನಿಂದ ಹೊರಹಾಕಿದ್ದರು. ಇದೇ ಕಾರಣದಿಂದಾಗಿ ಕೋಪಗೊಂಡು ವಿದ್ಯಾರ್ಥಿಗಳು ಪ್ರಾಂಶುಪಾಲರನ್ನು ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಈಗಾಗಲೇ ಈ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಇಂದು ಕಾಲೇಜು ಬಂದ್ ಮಾಡಲಾಗಿದ್ದು, ಸುರೇಶ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿರುನಲ್‌ವೇಲಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಟುಟಿಕೊರಿನ್ ಜಿಲ್ಲಾ ಪೊಲೀಸ್ ಅಧೀಕ್ಷಕ ದುರೈ ಅವರು ಪರಿಶೀಲನೆ ನಡೆಸುತ್ತಿದ್ದಾರೆ.