ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಾಶ್ಮೀರ: ಮತ್ತೆ ಗುಂಡಿನ ದಾಳಿ, ಓರ್ವ ಯೋಧನ ಸಾವು

Vishwanath S
Updated On : 11 Oct 2013, 7:57 am

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕೇರನ್ ಸೆಕ್ಟರ್ ಬಳಿ ಮತ್ತೆ ಒಳನುಸುಳುಕೋರರು ದಾಳಿ ನಡೆಸಿದ್ದು, ದಾಳಿಯಲ್ಲಿ ಭಾರತೀಯ ಯೋಧನೋರ್ವ ಶುಕ್ರವಾರ ಮೃತಪಟ್ಟಿದ್ದಾರೆ.

ಗಡಿ ನಿಯಂತ್ರಣ ರೇಖೆಯ(ಎಲ್‌ಒಸಿ) ಕೇರನ್ ಸೆಕ್ಟರ್ ಬಳಿ ಒಳನುಸುಳಿದ್ದ 30ರಿಂದ 40 ಮಂದಿ ಉಗ್ರರನ್ನು ಇತ್ತೀಚೆಗಷ್ಟೇ ಭಾರತೀಯ ಪಡೆಗಳು ಹಿಮ್ಮೆಟ್ಟಿಸಿತ್ತು. ಆದರೆ ಕಳೆದ ರಾತ್ರಿ ದಿಢೀರ್ ದಾಳಿ ನಡೆಸಿದ ಒಳನುಸುಳುಕೋರರ ಗುಂಡೇಟಿಗೆ ಯೋಧನೋರ್ವ ಬಲಿಯಾಗಿದ್ದಾರೆ ಎಂದು ಸೇನೆಯ ವಕ್ತಾರರು ತಿಳಿಸಿದ್ದಾರೆ.

ಕೇರನ್ ಸೆಕ್ಟರ್‌ನ ಕಾಚ್ಲಾ ಬಳಿ ಹೆಚ್ಚಾಗಿ ಉಗ್ರರು ಭಾರತವನ್ನು ಪ್ರವೇಶಿಸುತ್ತಿದ್ದಾರೆ. ಹೀಗಾಗಿ ಈ ಪ್ರದೇಶದಲ್ಲಿ ಭಾರತೀಯ ಯೋಧರು ನಿರಂತರವಾಗಿ ಗಸ್ತು ತಿರುಗುತ್ತಿದ್ದು, ಈ ವೇಳೆ ಯೋಧರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತೀಯ ಯೋಧರು ದಾಳಿ ನಡೆಸುತ್ತಿದ್ದಾಗ ಯೋಧನೋರ್ವನಿಗೆ ಗುಂಡು ತಗುಲಿದೆ. ತೀವ್ರವಾಗಿ ಗಾಯಗೊಂಡಿದ್ದ ಯೋಧನನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯೋಧನು ಇಂದು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಸೆಪ್ಟಂಬರ್ 24ರಂದು ಗಡಿಭಾಗದಲ್ಲಿರುವ ಕುಪ್‌ವಾರ ಜಿಲ್ಲೆಯ ಶಲ್ಭಾತಿ ಹಳ್ಳಿಯನ್ನು ಆಕ್ರಮಿಸಿಕೊಂಡಿದ್ದ 30ರಿಂದ 40 ಮಂದಿ ಒಳನುಸುಳುಕೋರರು ಸೇನೆ ವಿರುದ್ಧ ದಾಳಿಗೆ ಮುಂದಾಗಿದ್ದರು. ಇದೇ ವೇಳೆ ಒಳನುಸುಳುಕೋರರ ಹಿಮ್ಮೆಟ್ಟಿಸುವ ಕಾರ್ಯಾಚರಣೆ ಕೈಗೊಂಡ ಭಾರತೀಯ ಯೋಧರು ನಿರಂತರವಾಗಿ 15 ದಿನಗಳಿಂದ ಗುಂಡಿನ ದಾಳಿ ನಡೆಸಿದ್ದರು. ಉಗ್ರರ ವಿರುದ್ಧದ ಕಾರ್ಯಾಚರಣೆ ಯಶಸ್ವಿಯಾಗಿದ್ದು ದಾಳಿಯಲ್ಲಿ 7 ಉಗ್ರರು ಬಲಿಯಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement