ಬೆಂಗಳೂರಿನ ಜೆಡಿಎಸ್ ಕಚೇರಿ 'ಕೈ'ವಶ
ಸುದೀರ್ಘ ಕಾನೂನು ಹೋರಾಟದ ಬಳಿಕ ಈಗ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಜೆಡಿಎಸ್‌ನ ಪ್ರಧಾನ..
ಬೆಂಗಳೂರು: ಸುದೀರ್ಘ ಕಾನೂನು ಹೋರಾಟದ ಬಳಿಕ ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಜೆಡಿಎಸ್‌ನ ಪ್ರಧಾನ ಕಚೇರಿ ಈಗ ಮತ್ತೆ ಕಾಂಗ್ರೆಸ್ ವಶವಾಗಿದೆ.
ಬೆಂಗಳೂರಿನ ಜೆಡಿಎಸ್ ಕಚೇರಿ ಕಾಂಗ್ರೆಸ್‌ಗೆ ಸೇರಿದ್ದು ಎಂದು ಹೈಕೋರ್ಟ್ ವಿಭಾಗೀಯ ಪೀಠ ಶುಕ್ರವಾರ ತೀರ್ಪು ನೀಡಿದೆ. ಈ ತೀರ್ಪಿನಿಂದ ಜೆಡಿಎಸ್‌ಗೆ ಭಾರಿ ಹಿನ್ನಡೆಯಾಗಿದೆ.
ಜೆಡಿಎಸ್ ಕಚೇರಿ ಕಾಂಗ್ರೆಸ್ ಸ್ವತ್ತು ಎಂದು ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದರುವ ಹೈಕೋರ್ಟ್ ವಿಭಾಗೀಯ ಪೀಠ, ಜೆಡಿಎಸ್ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ. ಅಲ್ಲದೆ 3 ತಿಂಗಳಲ್ಲಿ ಕಚೇರಿ ತೆರವುಗೊಳಿಸುವಂತೆ ಮತ್ತು ಕೋರ್ಟ್ ಶುಲ್ಕ ಪಾವತಿಸುವಂತೆ ಸೂಚಿಸಿದೆ. 2005ರಲ್ಲಿ ಸಿಟಿ ಸಿವಿಲ್ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಜೆಡಿಎಸ್ ಹೈಕೋರ್ಟ್ ಮೊರೆ ಹೋಗಿತ್ತು.
ಕಾಂಗ್ರೆಸ್ ಮುಖಂಡರಾಗಿದ್ದ ಸುಬ್ಬಣ್ಣ ಮತ್ತು ರಂಗಸ್ವಾಮಿ ಅವರು 1954ರಲ್ಲಿ ಈ ಜಾಗವನ್ನು ತಮ್ಮ ಪಕ್ಷಕ್ಕೆ ದಾನ ಮಾಡಿದ್ದರು. ಆದರೆ ಈ ಸ್ವತ್ತು ತಮ್ಮದು ಎಂದು ಜೆಡಿಎಸ್ ಕೋರ್ಟ್ ಮೆಟ್ಟಿಲೇರಿತ್ತು.
1969ರಲ್ಲಿ ಕಾಂಗ್ರೆಸ್ ಇಬ್ಭಾಗವಾಗಿ ಕಾಂಗ್ರೆಸ್ ಐ ಹಾಗೂ ಕಾಂಗ್ರೆಸ್ ಕೋ ಎಂದು ಆಗಿತ್ತು. ಉಭಯ ಪಕ್ಷದಲ್ಲಿ ನಿಜವಾದ ಕಾಂಗ್ರೆಸ್ ಯಾವುದೂ ಎಂಬ ಗೊಂದಲ ಕೋರ್ಟ್ ಮೆಟ್ಟಿಲೇರಿತ್ತು. ಕಾಂಗ್ರೆಸ್ ಐ ನಿಜವಾದ ಕಾಂಗ್ರೆಸ್ ಎಂಬ ತೀರ್ಮಾನ ಚುನಾವಣಾ ಆಯೋಗದಿಂದ ಹೊರಬಿದ್ದಿತ್ತು.ಇದಾದ ನಂತರ ಕಾಂಗ್ರೆಸ್ ಕೋ ಹೆಸರಿನಲ್ಲಿದ್ದ ಈಗಿನ ಜೆಡಿಎಸ್ ಕಚೇರಿ ಯಾರಿಗೆ ಸೇರಿದ್ದು ಎಂಬ ಹೊಸ ವಿವಾದ ಹುಟ್ಟುಕೊಂಡಿತ್ತು. ಈ ಪ್ರಕರಣ ದಶಕಗಳ ಕಾಲ ವಿಚಾರಣೆ ನಡೆಯಿತು. 2005ರಲ್ಲಿ ಸಿಟಿ ಸಿವಿಲ್ ಕೋರ್ಟ್ ಈ ಕಚೇರಿ ಕಾಂಗ್ರೆಸ್ ಗೆ ಸೇರಿದ್ದು ಎಂದು ಅದೇಶ ನೀಡಿತ್ತು. ಈಗ ಹೈಕೋರ್ಟ್ ವಿಭಾಗೀಯ ಪೀಠ ಸದರಿ ಆದೇಶವನ್ನು ಎತ್ತಿ ಹಿಡಿದಿದೆ.