ಕಾಲುಬಾಯಿ ಪರಿಹಾರದಲ್ಲಿ ರೈತರಿಗೆ ವಂಚನೆ: ಎಚ್ಡಿಕೆ
ಕಾಲುಬಾಯಿ ರೋಗದಿಂದ ಅಸುನೀಗಿದ ಹಸುವಿನ ಮಾಲೀಕರಿಗೆ 25 ಸಾವಿರ ರುಪಾಯಿ ನೀಡುತ್ತೇವೆ ಎಂದು ಪ್ರಕಟಿಸಿದ್ದ..
ಬೆಂಗಳೂರು: ಕಾಲುಬಾಯಿ ರೋಗದಿಂದ ಅಸುನೀಗಿದ ಹಸುವಿನ ಮಾಲೀಕರಿಗೆ 25 ಸಾವಿರ ರುಪಾಯಿ ನೀಡುತ್ತೇವೆ ಎಂದು ಪ್ರಕಟಿಸಿದ್ದ ಸರ್ಕಾರ, ತನ್ನ ಆದೇಶದಲ್ಲಿ 16 ಸಾವಿರಕ್ಕೆ ಸೀಮಿತಗೊಳಿಸಿ ರೈತರನ್ನು ವಂಚಿಸಿದೆ ಎಂದು ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಶನಿವಾರ ಆರೋಪಿಸಿದ್ದಾರೆ.
ಈ ಸಂಬಂಧ ಇಂದು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರಕಟಿಸಿದ್ದು ಒಂದು, ಆದೇಶ ಹೊರಡಿಸಿರುವುದು ಮತ್ತೊಂದು. ಕಾಲುರೋಗದಿಂದ ಸತ್ತ ಹಸುವಿನ ಮಾಲೀಕನಿಗೆ 25 ಸಾವಿರ ರುಪಾಯಿ ನೀಡಲಾಗುತ್ತದೆ ಎಂದು ಸಚಿವ ಸಂಪುಟ ಸಭೆ ನಂತರ ಪಶುಸಂಗೋಪನೆ ಸಚಿವ ಟಿ.ಬಿ. ಜಯಚಂದ್ರ ಪ್ರಕಟಿಸಿದ್ದರು. ಆದರೆ, ಹೊರಬಿದ್ದಿರುವ ಸರ್ಕಾರಿ ಆದೇಶದ ಪ್ರಕಾರ 16,400 ರುಪಾಯಿ ಮಾತ್ರ ನೀಡಲಾಗುತ್ತದೆ ಎಂದು ದಾಖಲೆ ಸಹಿತ ದೂರಿದರು.
ಕಾಲು ಬಾಯಿ ರೋಗದ ಪರಿಹಾರಕ್ಕಾಗಿ ಪ್ರಕೃತಿ ವಿಕೋಪ ಪರಿಹಾರದಡಿ 5 ಕೋಟಿ ರುಪಾಯಿ ಮಾತ್ರ ಮಂಜೂರು ಮಾಡಲಾಗಿದೆ. ಕೇಂದ್ರ ಸರ್ಕಾರ ಮಾರ್ಗಸೂಚಿ ಅನ್ವಯ ಹಸು-ಎಮ್ಮೆ ಮೃತಪಟ್ಟಿದ್ದರೆ 16,400, ಎತ್ತಿಗೆ 15 ಸಾವಿರ ಹಾಗೂ ಕರುಗಳಿಗೆ 10 ಸಾವಿರ ನೀಡುವುದಾಗಿ ಆದೇಶದಲ್ಲಿ ಸೂಚಿಸಲಾಗಿದೆ. ಇನ್ನು ಜಿಲ್ಲಾ ಹಾಲು ಉತ್ಪಾದಕರ ಮಂಡಳಿಯಲ್ಲಿ ಷೇರುದಾರರಾಗಿಲ್ಲದಿದ್ದರೆ ಈ ಪರಿಹಾರವೂ ಸಿಗುವುದಿಲ್ಲ ಎಂದರು.
ಸರ್ಕಾರ ಈಗ ಘೋಷಿಸಿರುವ ಪರಿಹಾರವನ್ನು ಇನ್ನು 10 ದಿನದಲ್ಲಿ ಅರ್ಹರಿಗೆ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಪಾದಯಾತ್ರೆ ಮಾಡುತ್ತೇನೆ. ಅವರಲ್ಲಿ ಮಾಹಿತಿ ಇಲ್ಲದಿದ್ದರೆ ನಾನು ಮಾಹಿತಿ ನೀಡುತ್ತೇನೆ. ಯಾವ ಮಾಲೀಕ ಎಷ್ಟು ಹಸು ಕಳೆದುಕೊಂಡಿದ್ದಾನೆ ಎಂಬ ಮಾಹಿತಿ ನನ್ನಲ್ಲಿದೆ ಎಂದರು.
ಕಾಂಗ್ರೆಸ್ ಸರ್ಕಾರ ಈ ಪರಿಹಾರದಲ್ಲೂ ಸಣ್ಣ ರಾಜಕಾರಣ ಮಾಡುವುದು ಸ್ಪಷ್ಟವಾಗುತ್ತಿದೆ. ಕಾಂಗ್ರೆಸ್ನವರು ಹಸು ಕಳೆದುಕೊಂಡಿದ್ದರೆ ಪರಿಹಾರ ಸಿಗುತ್ತದೆ. ಅವರೇನಾದರೂ ಬಿಜೆಪಿ, ಜೆಡಿಎಸ್ ಬೆಂಬಲಿಗರಾಗಿದ್ದರೆ ಅವರಿಗೆ ಪರಿಹಾರ ಸಿಗುವುದು ಕಷ್ಟ. ಇಂತಹ ಸಣ್ಣ ರಾಜಕೀಯ ಮಾಡುವುದು ಬೇಡ ಎಂದರು.