ಫೈಲಿನ್ಗೆ ಒಡಿಶಾದಲ್ಲಿ ಮೂವರು ಬಲಿ
ಒಡಿಶಾ ಹಾಗೂ ಆಂಧ್ರಪ್ರದೇಶ ಕರಾವಳಿಯತ್ತ ಭಾರಿ ವೇಗದಲ್ಲಿ ಫೈಲಿನ್ ಚಂಡಮಾರುತ ಧಾವಿಸುತ್ತಿದ್ದು, ಬಿರುಗಾಳಿಗೆ ಮರ ಉರುಳಿ ಬಿದ್ದು ಮೂವರು ಮೃತಪಟ್ಟಿದ್ದಾರೆ.
ಭುವನೇಶ್ವರ್: ಒಡಿಶಾ ಹಾಗೂ ಆಂಧ್ರಪ್ರದೇಶ ಕರಾವಳಿಯತ್ತ ಭಾರಿ ವೇಗದಲ್ಲಿ ಫೈಲಿನ್ ಚಂಡಮಾರುತ ಧಾವಿಸುತ್ತಿದ್ದು, ಇದರ ಪರಿಣಾಮವಾಗಿ ಒಡಿಶಾದ ಗೋಪಾಲಪುರದ ಬಳಿ ಭಾರಿ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಬಿರುಗಾಳಿಗೆ ಮರ ಉರುಳಿ ಬಿದ್ದು ಮೂವರು ಮೃತಪಟ್ಟಿದ್ದಾರೆ.
ಫೈಲಿನ್ ಚಂಡಮಾರುತ ಪ್ರತಿ ಗಂಟೆಗೆ 20 ಕಿ.ಮೀ.ನಷ್ಟು ವೇಗ ಹೆಚ್ಚಿಸಿಕೊಳ್ಳುತ್ತಿದ್ದು, ಮುಂದಿನ 24 ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕನಿಷ್ಟ ಪಕ್ಷ 6 ಗಂಟೆಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇಡೀ ಅಮೆರಿಕವನ್ನೇ ತರಗೆಲೆಯಂತೆ ಆಡಿಸಿದ್ದ 'ಕತ್ರಿನಾ'ಕ್ಕಿಂತಲು ತೀವ್ರ ಫೈಲಿನ್ ಚಂಡಮಾರುತ ರಾತ್ರಿ 8 ಗಂಟೆ ಸುಮಾರಿಗೆ ಬಡಿಶಾ ಕರಾವಳಿಯ ಗಂಜಂ ಜಿಲ್ಲೆಯ ಗೋಪಾಲ್ಪುರಕ್ಕೆ ಅಪ್ಪಳಿಸಲಿದೆ.
ಚಂಡಮಾರುತ ಉತ್ತರ ಆಂಧ್ರಪ್ರದೇಶ ಮಾರ್ಗವಾಗಿ ರಾತ್ರಿ 8 ಗಂಟೆಗೆ ಬಡಿಶಾ ಕರಾವಳಿಯ ಗೋಪಾಲಪುರಕ್ಕೆ ಅಪ್ಪಳಿಸಲಿದೆ ಎಂದು ಕೇಂದ್ರ ಹವಮಾನ ಇಲಾಖೆ ತಿಳಿಸಿದೆ. ಪ್ರಚಂಡ ಚಂಡಮಾರುತಗಳ ವರ್ಗಕ್ಕೆ ಸೇರಿದ ಫೈಲಿನ್ ಬಂಗಾಳಕೊಲ್ಲಿಯಿಂದ ಸುಮಾರು 220 ಕಿ.ಮೀ ವೇಗದಲ್ಲಿ ಪೂರ್ವ ಕರಾವಳಿಯತ್ತ ಮುನ್ನುಗುತ್ತಿದೆ. ಕ್ಷಣ ಕ್ಷಣಕ್ಕೂ ಚಂಡಮಾರುತದ ತೀವ್ರತೇ ಹೆಚ್ಚುತ್ತಿರುವುದು ಮತ್ತಷ್ಟು ಆಂತಕಕ್ಕೆ ಈಡು ಮಾಡಿದೆ.
ಗೋಪಾಲಪುರಕ್ಕೆ ಅಪ್ಪಳಿಸಲಿರುವ ಫೈಲಿನ್ ಚಂಡಮಾರುತದ ನಿಜವಾದ ತೀವ್ರತೆ ಮತ್ತು ಅದು ಉಂಟು ಮಾಡುವ ದುಷ್ಪರಿಣಾಮ ಮುಂದೆ ತಿಳಿಯಲಿದೆ.
ಚಂಡಮಾರುತದ ಪರಿಣಾಮವಾಗಿ ಈಗಾಗಲೇ ಒಡಿಶಾದಾದ್ಯಂತ ಭಾರೀ ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಒಡಿಶಾ ಸರ್ಕಾರ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ಸದ್ಯ ಸುಮಾರು 3,61,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ.
ಇದೇ ವೇಳೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಸರ್ಕಾರ ರಾಜ್ಯದ ಒಳಗೆ ಸಂಚರಿಸುವ ರೈಲುಗಳ ಓಡಾಟವನ್ನು ರದ್ದುಪಡಿಸಿದೆ. ಅಲ್ಲದೆ ಹವಾಮಾನದ ವೈಪರೀತ್ಯ ಹಿನ್ನೆಲೆಯಲ್ಲಿ ರಾಜ್ಯದ ವಿಮಾನಯಾನ ಸಹ ಸ್ತಬ್ದಗೊಂಡಿದೆ.
ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಜನರು ತಮ್ಮ ಮನೆಗಳಿಂದ ಯಾರು ಹೊರ ಬರದಂತೆ ಜಿಲ್ಲಾಡಳಿತ ಸೂಚಿಸಿದೆ. ರಾಜ್ಯಾದ್ಯಂತ ಭಾರಿ ಮಳೆಯಾಗುತ್ತಿರುವ ಪರಿಣಾಮವಾಗಿ ಮರ ಉರುಳಿ ಬಿದ್ದು ಮೂವರು ಮೃತಪಟ್ಟಿದ್ದಾರೆ.
ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯದಲ್ಲಿ ಫೈಲಿನ್ ಚಂಡಮಾರುತ ಉಂಟು ಮಾಡುವ ಅನಾಹುತಗಳನ್ನು ಸಮರ್ಥವಾಗಿ ಎದುರಿಸಲು ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಇಂದು ದೆಹಲಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್ಡಿಎಂಎ) ಸಭೆಯನ್ನು ಸಂಪುಟ ಕಾರ್ಯದರ್ಶಿಗಳು ಕರೆದಿದ್ದು, ಫೈಲಿನ್ ಚಂಡಮಾರುತ ಒಡಿಶಾದ ಗಂಜಂ ಜಿಲ್ಲೆಗೆ ನೇರವಾಗಿ ಅಪ್ಪಳಿಸುವುದರಿಂದ ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಉಂಟಾಗಲಿದೆ. ಹೀಗಾಗಿ ಎನ್ಡಿಎಂಎನ 1,200 ಮಂದಿ ಸಿಬ್ಬಂದಿಯನ್ನು ಒಡಿಶಾಕ್ಕೆ, 600 ಸಿಬ್ಬಂದಿಯನ್ನು ಆಂಧ್ರಕ್ಕೆ ರವಾನಿಸಲಾಗಿದೆ ಎಂದು ಎನ್ಡಿಎಂಎನ ಮುಖ್ಯಸ್ಥ ಶಶಿಧರ್ ರೆಡ್ಡಿ ತಿಳಿಸಿದ್ದಾರೆ.