'ಫೈಲಿನ್' ಚಂಡಮಾರುತಕ್ಕೆ 25 ಬಲಿ
ಫೈಲಿನ್ ಚಂಡಮಾರುತ ಅಪ್ಪಳಿಸಿದ ಹಿನ್ನೆಲೆಯಲ್ಲಿ ಒಡಿಶಾದಲ್ಲಿ ಸೋಮವಾರ ಮೃತಪಟ್ಟವರ ಸಂಖ್ಯೆ 25ಕ್ಕೇರಿದೆ...
ಭುವನೇಶ್ವರ್: ಫೈಲಿನ್ ಚಂಡಮಾರುತ ಅಪ್ಪಳಿಸಿದ ಹಿನ್ನೆಲೆಯಲ್ಲಿ ಒಡಿಶಾದಲ್ಲಿ ಸೋಮವಾರ ಮೃತಪಟ್ಟವರ ಸಂಖ್ಯೆ 25ಕ್ಕೇರಿದೆ.
ಬಂಗಾಳಕೊಳ್ಳಿಯಲ್ಲಿ ಎದ್ದಿದ್ದ ತೀವ್ರ ಸ್ವರೂಪದ ಫೈಲಿನ್ ಚಂಡಮಾರುತ ಒಡಿಶಾ ಕರಾವಳಿಗೆ ಅಪ್ಪಳಿಸಿತ್ತು. ಇದರಿಂದ ಉಂಟಾದ ಪ್ರವಾಹಕ್ಕೆ ಸಿಲುಕಿ ಇಂದು ಮತ್ತೆ 4 ಮಂದಿ ಮೃತಪಟ್ಟಿದ್ದು, ಇದರೊಂದಿಗೆ ಫೈಲಿನ್ಗೆ ಒಡಿಶಾದಲ್ಲೇ ಸುಮಾರು 25 ಮಂದಿ ಬಲಿಯಾಗಿದ್ದಾರೆ ಎಂದು ವಿಪತ್ತು ನಿರ್ವಹಣಾ ಮಂಡಳಿಯ ಆಯುಕ್ತ ಪಿ.ಕೆ. ಮೋಹಪತ್ರ ಅವರು ತಿಳಿಸಿದ್ದಾರೆ.
ವೇಗದ ಚಂಡಮಾರುತಕ್ಕೆ ಸಿಲುಕಿ 21 ಬಲಿಯಾಗಿದ್ದು, ಅತಿಯಾದ ಮಳೆಯಿಂದಾಗಿ ಮಯೂರ್ಬಾನ್ಜ್ ಮತ್ತು ಬಾದ್ರಕ್ನಲ್ಲಿ ಪ್ರವಾಹಕ್ಕೆ ಸಿಲುಕಿ ನಾಲ್ಕು ಮಂದಿ ಬಲಿಯಾಗಿದ್ದಾರೆ. ಚಂಡಮಾರುತ ಅಪ್ಪಳಿಸಿದ್ದರಿಂದ ರಾಜ್ಯಾದ್ಯಂತ ಬಾರಿ ಪ್ರಮಾಣದಲ್ಲಿ ಬೆಳೆ ನಾಶಗೊಂಡಿದ್ದು, ಪ್ರವಾಹಕ್ಕೆ ಹಲವಾರು ಮರಗಳು ಧರೆಗುರುಳಿವೆ. ಇದೇ ವೇಳೆ, ಘಟನೆಯಲ್ಲಿ ಸುಮಾರು ಮಂದಿ ಗಾಯಗೊಂಡಿರುವುದಾಗಿ ಮಾಹಿತಿ ನೀಡಿದರು.
ಒಡಿಶಾದ ಗಂಜಾಮ್ ಜಿಲ್ಲೆ ಸೇರಿದಂತೆ ಕರಾವಳಿ ತೀರದ 7 ಜಿಲ್ಲೆಗಳಲ್ಲಿ ಫೈಲಿನ್ ಅಟ್ಟಹಾಸ ಇನ್ನು ಮುಂದುವರೆದಿದೆ. ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಲಕ್ಷಾಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮುಂದಿನ ಒಂದೆರಡು ದಿನಗಳಲ್ಲಿ ಫೈಲಿನ್ ಚಂಡಮಾರುತ ದುರ್ಬಲವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.