ಮತ್ತೆ 14 ದಿನಗಳ ಪೆರೋಲ್ ಪಡೆದ ಸಂಜಯ್
ಮುಂಬೈ: ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ 14 ದಿನಗಳ ಪೆರೋಲ್ ಮೇಲೆ ಬಿಡುಗಡೆ ಹೊಂದಿದ್ದ ನಟ ಸಂಜಯ್ ದತ್‌ಗೆ ಮತ್ತೆ 14 ದಿನಗಳ ಪೆರೋಲ್ ಅವಧಿಯನ್ನು ಜೈಲು ಅಧಿಕಾರಿಗಳು ವಿಸ್ತರಿಸಿದ್ದಾರೆ.
ಗಾಯಗೊಂಡಿರುವ ಕಾಲಿಗೆ ಚಿಕಿತ್ಸೆ ಮಾಡಿಸಿಕೊಳ್ಳಲು ಈ ಹಿಂದೆ ಅ. 1ರಂದು ಸಂಜಯ್ ಅವರಿಗೆ ಯರವಾಡ ಜೈಲು ಅಧಿಕಾರಿಗಳು 14 ದಿನಗಳ ಪೆರೋಲ್ ನೀಡಿದ್ದರು. ಸಂಜಯ್ ದತ್‌ಗೆ ನೀಡಿದ್ದ ಪೆರೋಲ್ ಅವಧಿ ಇಂದಿಗೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಸಂಜಯ್ ಇಂದು ಜೈಲಿಗೆ ವಾಪಸಾಗಬೇಕಿತ್ತು. ಆದರೆ ಕಾಲಿನ ಗಾಯ ವಾಸಿಯಾಗದ ಹಿನ್ನೆಲೆಯಲ್ಲಿ ಮತ್ತೆ 14 ದಿನಗಳ ಕಾಲ ಪೆರೋಲ್ ಅವದಿಯನ್ನು ಅಧಿಕಾರಿಗಳು ವಿಸ್ತರಿಸಿದ್ದಾರೆ.
ಭಾರತೀಯ ದಂಡ ಸಂಹಿತೆ ಅನ್ವಯ ಪ್ರತಿಯೊಬ್ಬ ಕೈದಿಗೂ ವರ್ಷದಲ್ಲಿ ಇಂತಿಷ್ಟು ದಿನ ಪೆರೋಲ್ ಮೂಲಕ ರಜೆ ನೀಡಲಾಗುತ್ತದೆ. ಕೆಲವೊಂದು ವಿಶೇಷ ಕಾರಣಗಳಿಂದಾಗಿ ಅಥವಾ ಸಂದರ್ಭಕ್ಕನುಗುಣವಾಗಿ ಪೆರೋಲ್ ನೀಡುವ ಪದ್ದತಿಯಿದೆ. ಹೀಗಾಗಿ ಕಾಲಿನ ಗಾಯದ ಹಿನ್ನೆಲೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವ ಸಂಜಯ್‌ಗೆ ಪೆರೋಲ್ ಅವಧಿಯನ್ನು ವಿಸ್ತರಿಸಲಾಗಿದೆ.
1993ರಲ್ಲಿ ಮುಂಬೈ ಸರಣಿ ಬಾಂಬ್ ಸ್ಫೋಟದ ವೇಳೆ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ ಅಪರಾಧಕ್ಕಾಗಿ ಮಾರ್ಚ್‌ನಲ್ಲಿ ಸಂಜಯ್ ದತ್‌ಗೆ ಟಾಡಾ ಕೋರ್ಟ್ ಐದು ವರ್ಷಗಳ ಶಿಕ್ಷೆ ವಿಧಿಸಿತ್ತು.