ಕಾಲ್ತುಳಿತ: ಆರೋಪ ನಿರಾಕರಿಸಿದ ಪೊಲೀಸರು
ಮಧ್ಯಪ್ರದೇಶದ ರತನ್ಗಡ್ನಲ್ಲಿ ಭಾನುವಾರ ಸಂಭವಿಸಿದ ಕಾಲ್ತುಳಿತ ದುರಂತದ ಬಗ್ಗೆ ತನಿಖೆ ಆರಂಭವಾಗಿದ್ದು, ಮಧ್ಯಪ್ರದೇಶ...
ಡಾಟಿಯಾ: ಮಧ್ಯಪ್ರದೇಶದ ರತನ್ಗಡ್ನಲ್ಲಿ ಭಾನುವಾರ ಸಂಭವಿಸಿದ ಕಾಲ್ತುಳಿತ ದುರಂತದ ಬಗ್ಗೆ ತನಿಖೆ ಆರಂಭವಾಗಿದ್ದು, ಮಧ್ಯಪ್ರದೇಶ ಪೊಲೀಸರು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.
ಭಾನುವಾರ ಸಂಭವಿಸಿದ ಕಾಲ್ತುಳಿತದಲ್ಲಿ 115 ಮಂದಿ ಸಾವಿಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ ಶಿವರಾಜ್ ಚೌಹಾಣ್ ನೇತೃತ್ವದ ಸರ್ಕಾರ ಡಾಟಿಯಾ ಜಿಲ್ಲೆಯ ಎಸ್ಪಿ ಮತ್ತು ಜಿಲ್ಲಾ ಮೆಜಿಸ್ಟ್ರೇಟ್ ಸೇರಿದಂತೆ 21 ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿಸಿತ್ತು.
ಸೋಮವಾರ ಮುಖ್ಯಮಂತ್ರಿ ನ್ಯಾಯಾಂಗ ಸಮಿತಿಯೊಂದನ್ನು ನೇಮಿಸಿ ತನಿಖೆಗೆ ಆದೇಶ ನೀಡಿದ್ದು, ಮಂಗಳವಾರ ತನಿಖೆ ಆರಂಭವಾಗಿದೆ.
ಪ್ರಸ್ತುತ ಸಮಿತಿಯ ನೇತೃತ್ವವನ್ನು ಸಿಟ್ಟಿಂಗ್ ಹೈಕೋರ್ಟ್ ಜಡ್ಜ್ ವಹಿಸಿದ್ದಾರೆ. ಜನರ ನೂಕುನುಗ್ಗಲು ವೇಳೆ ಪೊಲೀಸರು ಲಾಠಿಚಾರ್ಜ್ ನಡೆಸಿದ ಕಾರಣ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಮಾತ್ರವಲ್ಲದೆ ಭಕ್ತಾದಿಗಳನ್ನು ಲೂಟಿ ಮಾಡಿ, ಪೊಲೀಸರು ಮೃತದೇಹಗಳನ್ನು ಸೇತುವೆಯಿಂದ ಹೊರ ಎಸೆಯುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಯೊಬ್ಬರು ದೂರಿದ್ದು ಈ ಬಗ್ಗೆಯೂ ತನಿಖೆ ನಡೆಸಲಾಗುವುದು.
ಆದರೆ ಈ ಎಲ್ಲಾ ಆರೋಪಗಳನ್ನು ಪೊಲೀಸರು ನಿರಾಕರಿಸಿದ್ದಾರೆ.
ಕಾಲ್ತುಳಿತ ಪ್ರಕರಣದ ಬಗ್ಗೆ 2 ತಿಂಗಳೊಳಗೆ ವರದಿ ಸಲ್ಲಿಸಬೇಕೆಂದು ಸರ್ಕಾರ ಒತ್ತಾಯಿಸಿದ್ದು, ವರದಿ ಸಲ್ಲಿಸಿದ 15 ದಿನಗಳಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.