ಅಣ್ಣಾ ಹಜಾರೆಗೆ ಮೋಸ ಮಾಡಿದ ಕೇಜ್ರಿವಾಲ್ ನ್ನು ನಂಬುತ್ತೀರಾ?
ವಾರಗಳ ಹಿಂದೆ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷವನ್ನು ಟೀಕಿಸಿ ಮಾತನಾಡಿದ ಪ್ರೀರೆಕಾರ್ಡೆಡ್ ಟೆಲಿಫೋನಿಕ್ ಸಂದೇಶ ಮತ್ತು ...
ನವದೆಹಲಿ: ವಾರಗಳ ಹಿಂದೆ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷವನ್ನು ಟೀಕಿಸಿ ಮಾತನಾಡಿದ ಪ್ರೀರೆಕಾರ್ಡೆಡ್ ಟೆಲಿಫೋನಿಕ್ ಸಂದೇಶ ಮತ್ತು ರೇಡಿಯೋ ಪ್ರಸಾರ ಮಾಡಿದ ಆಮ್ ಆದ್ಮಿ ಪಕ್ಷದ ನೇತಾರ ಅರವಿಂದ್ ಕೇಜ್ರಿವಾಲ್ ಬಗ್ಗೆ ಇದೀಗ ಹೊಸತೊಂದು ಸಂದೇಶ ಹರಿದಾಡತೊಡಗಿದೆ.
ದೆಹಲಿಯಲ್ಲಿರುವ ನಾಗರಿಕರಿಗೆ ಅನಾಮಿಕ ದೂರವಾಣಿ ಸಂದೇಶವೊಂದು ಬರುತ್ತಿದ್ದು, ಅದರಲ್ಲಿ ಅಣ್ಣಾ ಹಜಾರೆಗೆ ಮೋಸ ಮಾಡಿದ ಅರವಿಂದ್ ಕೇಜ್ರಿವಾಲ್ ನ್ನು ನೀವು ನಂಬಬೇಡಿ ಎಂದು ವಿನಂತಿಸಲಾಗುತ್ತಿದೆ.
ಪ್ರೀರೆಕಾರ್ಡೆಡ್ ಆಗಿರುವ ದೂರವಾಣಿ ಸಂದೇಶದಲ್ಲಿ " ಅಣ್ಣಾ ಹಜಾರೆಯನ್ನು ಮೋಸ ಮಾಡಿದ ವ್ಯಕ್ತಿ ಯಾರನ್ನು ಬೇಕಾದರೂ ಮತ್ತು ಎಲ್ಲರನ್ನೂ ಮೋಸಮಾಡಬಲ್ಲರು" ಎಂದು ಹೇಳಲಾಗಿದೆ.
ಅನಾಮಿಕ ಕರೆಯ ಮೂಲ ಯಾವುದು ಎಂದು ಈವರೆಗೆ ತಿಳಿದು ಬಂದಿಲ್ಲ. ಅದೇ ವೇಳೆ ಬಿಜೆಪಿಯಾಗಲೀ ಕಾಂಗ್ರೆಸ್ ಪಕ್ಷವಾಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಆದಾಗ್ಯೂ, ಇಂಥಾ ಕೃತ್ಯವನ್ನು ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅಥವಾ ಬಿಜೆಪಿ ಮಾಡಿರಬಹುದು. ಆದರೆ ನಾವು ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದು ಆಮ್ ಆದ್ಮಿ ಪಕ್ಷ ಹೇಳಿಕೆ ನೀಡಿದೆ.