ಕಲ್ಲಿದ್ದಲು ಹಗರಣ: ಬಿಜೆಪಿ ಟೀಕೆಗೆ 'ಕೈ' ತಿರುಗೇಟು
ಕಲ್ಲಿದ್ದಲು ಘಟಕ ಹಂಚಿಕೆ ಪ್ರಕರಣದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆರೋಪಿಯನ್ನಾಗಿ ಪರಿಗಣಿಸಬೇಕೆಂದು ಕಲ್ಲಿದ್ದಲು ಇಲಾಖೆ...
ನವದೆಹಲಿ: ಕಲ್ಲಿದ್ದಲು ಘಟಕ ಹಂಚಿಕೆ ಪ್ರಕರಣದಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಆರೋಪಿಯನ್ನಾಗಿ ಪರಿಗಣಿಸಬೇಕೆಂದು ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಪಿ.ಸಿ.ಪರಾಖ್ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಬಿಜೆಪಿ ಕಾಂಗ್ರೆಸ್ ವಿರುದ್ದ ಟೀಕಾಪ್ರಹಾರ ಆರಂಭಿಸಿದೆ.
ಕಲ್ಲಿದ್ದಲು ಘಟಕ ಹಂಚಿಕೆ ಅವ್ಯವಹಾರದ ವೇಳೆ ಮನಮೋಹನ್ ಸಿಂಗ್ ಕಲ್ಲಿದ್ದಲು ಸಚಿವಾಲಯದ ಉಸ್ತವಾರಿ ವಹಿಸಿದ್ದರಿಂದ ಅವರು ಕೂಡಾ ತಪ್ಪಿತಸ್ಥರು ಎಂದು ಪರಾಖ್ ಹೇಳಿದ್ದರು.
ಪರಾಖ್ ಹೇಳಿಕೆಗೆ ಬೆಂಬಲ ವ್ಯಕ್ತ ಪಡಿಸಿದ ಬಿಜೆಪಿ, ಪ್ರಧಾನಿ ಮನಮೋಹನ್ ಸಿಂಗ್ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದೆ.
ಅದೇ ವೇಳೆ ಈ ಪ್ರಕರಣದಲ್ಲಿ ಪ್ರಧಾನಿಯವರನ್ನು ರಕ್ಷಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. ಇದೊಂದು ದೊಡ್ಡ ಹಗರಣ ಮಾತ್ರವಲ್ಲದೆ ತಾವು ಕಲ್ಲಿದ್ದಲು ಘಟಕವನ್ನು ಉಚಿತವಾಗಿ ನೀಡಿದ್ದೇವೆ ಎಂದು ನಾವು ನಂಬುವಂತೆ ಕಾಂಗ್ರೆಸ್ ಬಯಸುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿತ್ತು.
ಬಿಜೆಪಿ ಟೀಕೆಗೆ ಎದಿರೇಟು ನೀಡಿದ ಕಾಂಗ್ರೆಸ್, ಬಿಜೆಪಿ ಸ್ವಯಂ ಸ್ಫೋಟಕಗೊಳ್ಳುವಂತಹ ಸ್ವಯಂಚಾಲಿತ ಆಯುಧವಾಗಿದೆ. ಆದರೆ ದುರದೃಷ್ಟವಾತ್ ಅದು ಖಾಲಿಯಾಗಿದೆ ಎಂದು ಮಾಹಿತಿ ಮತ್ತು ಪ್ರಸಾರಾಂಗ ಸಚಿವ ಮನೀಶ್ ತಿವಾರಿ ಕುಹಕವಾಡಿದ್ದಾರೆ.
ಬಿಜೆಪಿ ಕಳೆದ 10 ವರ್ಷಗಳಿಂದ ಇದನ್ನೇ ಹೇಳುತ್ತಾ ಬಂದಿದೆ. ಪ್ರಸ್ತುತ ಹಗರಣವು ಸುಪ್ರೀಂಕೋರ್ಟ್ ಸುಪರ್ದಿಯಲ್ಲಿರುವಾಗ ಜನರು ಸಂಯಮದಿಂದ ತೀರ್ಪಿಗಾಗಿ ಕಾಯಬೇಕಾಗಿದೆ ಎಂದು ತಿವಾರಿ ಹೇಳಿದ್ದಾರೆ.