ವಶಪಡಿಸಿಕೊಂಡಿರುವ ಅಮೆರಿಕನ್ ನೌಕೆ ಬಗ್ಗೆ ಮೌನ ಯಾಕೆ?
ತಮಿಳ್ನಾಡು ಕರಾವಳಿ ರಕ್ಷಣಾ ಪಡೆ ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರ ಹೊಂದಿರುವ ಅಮೆರಿಕದ ಅಡ್ವಾನ್ಫೋರ್ಟ್ ಕಂಪನಿಯ ಎಂವಿ...
ಚೆನ್ನೈ/ ಟ್ಯೂಟಿಕೋರಿನ್ : ತಮಿಳ್ನಾಡು ಕರಾವಳಿ ರಕ್ಷಣಾ ಪಡೆ ವಶಪಡಿಸಿಕೊಂಡಿರುವ ಶಸ್ತ್ರಾಸ್ತ್ರ ಹೊಂದಿರುವ ಅಮೆರಿಕದ ಅಡ್ವಾನ್ಫೋರ್ಟ್ ಕಂಪನಿಯ ಎಂವಿ ಸೀಮ್ಯಾನ್ ಗಾರ್ಡ್ ಓಹಿಯೋ ಎಂಬ ನೌಕೆ ಬಗ್ಗೆ ನಿಗೂಢತೆ ಇನ್ನೂ ಮುಂದುವರಿದೆ. ಪ್ರಸ್ತುತ ನೌಕೆಯು ಶಸ್ತ್ರಾಸ್ತ್ರಗಳನ್ನು ಸಾಗಿಸುವ ಕಾರ್ಯದಲ್ಲಿ ತೊಡಗಿಲ್ಲ ಎಂದು ಹೆಚ್ಚುವರಿ ದೇಶೀಯ ರಕ್ಷಣಾ ಸಲಹೆಗಾರ ನೆಹಚಾಲ್ ಸಂಧು ಹೇಳಿಕೆ ನೀಡಿದ್ದರೂ, ಇನ್ನು ಕೆಲವು ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ.
ತಮಿಳ್ನಾಡು ಕರಾವಳಿಯಲ್ಲಿ ಬಂಧಿತವಾಗಿರುವ ಅಮೆರಿಕನ್ ನೌಕೆ ಎಂವಿ ಸೀಮ್ಯಾನ್ ಗಾರ್ಡ್ ಓಹಿಯೋ ಬಗ್ಗೆ ತಮಿಳ್ನಾಡು ಮತ್ತು ಇನ್ನಿತರ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿದ್ದರೂ ಸರಿಯಾದ ಉತ್ತರ ಇನ್ನೂ ಲಭ್ಯವಾಗಿಲ್ಲ.
ಓಹಿಯೋ ನೌಕೆಯ ಬಗ್ಗೆ ಹೆಚ್ಚಿನ ಮಾಹಿತಿ ಬೇಕೆಂದು ಭಾರತ ಸರ್ಕಾರ ಅಮೆರಿಕನ್ ರಾಯಭಾರಿ ಕಚೇರಿಯನ್ನು ಒತ್ತಾಯಿಸಿದೆ. ಆದರೆ ನೌಕೆಯನ್ನು ಬೇಗನೆ ಬಿಡುಗಡೆ ಮಾಡಬೇಕೆಂದು ಅಮೆರಿಕ ಭಾರತದ ಮೇಲೆ ಒತ್ತಾಯಿಸುತ್ತಿದೆ ಎಂಬ ಸುದ್ದಿಯೂ ಕೇಳಿ ಬರುತ್ತಿದೆ.
ಏತನ್ಮಧ್ಯೆ, ತಮಿಳ್ನಾಡು ಸರ್ಕಾರ ಪ್ರಸ್ತುತ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ತಮಿಳ್ನಾಡು ಕ್ಯು ಬ್ರಾಂಚ್ಗೆ ಪ್ರಕರಣವನ್ನು ವರ್ಗಾಯಿಸಿದೆ.
ನೌಕೆಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಬಗ್ಗೆ ನೌಕೆಯಲ್ಲಿದ್ದ 35 ಮಂದಿ ವಿರುದ್ಧ ತಮಿಳ್ನಾಡು ಮೆರೀನ್ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ರಕ್ಷಣಾ ಪಡೆಯು ಓಹಿಯೋ ನೌಕೆಯಿಂದ 31 ರೈಫಲ್ ಮತ್ತು 50,000 ರೌಂಡ್ ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ.
ಅದೇ ವೇಳೆ ಸರಿಯಾದ ದಾಖಲೆಗಳಿಲ್ಲದೆ ಅಕ್ರಮವಾಗಿ 1,500 ಲೀಟರ್ ಡೀಸಲ್ ಖರೀದಿಸಿದ್ದಕ್ಕಾಗಿ ಅವಶ್ಯಕ ಸಾಮಾಗ್ರಿ ಕಾನೂನಿನಡಿಯಲ್ಲಿ ಕೇಸು ದಾಖಲಿಸಲಾಗಿದೆ.
ಬಂಧಿತರಾದ 35 ಜನರಲ್ಲಿ 10 ಜನ ನೌಕೆಯಲ್ಲಿನ ನೌಕರರಾಗಿದ್ದು (8 -ಭಾರತೀಯರು ಮತ್ತು 2-ಉಕ್ರೇನ್ನವರು), ಉಳಿದವರು ಸೆಕ್ಯೂರಿಟಿ ಗಾರ್ಡ್ಗಳಾಗಿದ್ದಾರೆ. (6 ಮಂದಿ ಬ್ರಿಟಿಷರು, 14 ಇಸ್ಟೋನಿಯಾದವರು, ಒಬ್ಬ ಉಕ್ರೇನ್ ಮತ್ತು 4 ಭಾರತೀಯರಿದ್ದಾರೆ).
ಈ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ!
1. ಟ್ಯೂಟಿಕೋರಿನ್ ಫೈಲಿನ್ ಚಂಡಮಾರುತ ಪ್ರಭಾವಕ್ಕೊಳಗಾಗಲು ಸಾಧ್ಯತೆಯಿರುವ ಪ್ರದೇಶವಾಗಿದ್ದರೂ, ಅಲ್ಲಿಗೆ ತಾವು ಬಂದಿರುವ ಬಗ್ಗೆ ಅಡ್ವಾನ್ಫೋರ್ಟ್ ಕಂಪನಿ ಸಬೂಬು ನೀಡಿ ತಮ್ಮನ್ನು ಸಮರ್ಥಿಸಿಕೊಳ್ಳುತ್ತಿರುವುದರ ಉದ್ದೇಶವೇನು?
2. ಎಂವಿ ಸೀಮ್ಯಾನ್ ಗಾರ್ಡ್ ಓಹಿಯೋ ಆಗಸ್ಟ್ನಲ್ಲಿ ಕೊಚ್ಚಿಗೆ ಬಂದಿತ್ತು. ಅವರಲ್ಲಿ ಎಲ್ಲ ದಾಖಲೆಗಳು ಇದೆ ಎಂದಾದ ಮೇಲೆ ಭಾರತೀಯ ಮೂಲಗಳು ಪ್ರಸ್ತುತ ನೌಕೆಯ ಬಗ್ಗೆ ಯಾಕೆ ಅನುಮಾನ ವ್ಯಕ್ತಪಡಿಸಬೇಕು?
3. ನೌಕೆ ಡೀಸಲ್ ಖರೀದಿ ಮಾಡಿರುವುದರ ಬಗ್ಗೆ ದಾಖಲೆಗಳು ಎಲ್ಲಿವೆ?
4. ಮಾಧ್ಯಮದವರಿಗೆ ಯಾಕೆ ಕೆಲವೇ ಕೆಲವು ಮಾಹಿತಿಗಳನ್ನು ಮಾತ್ರ ನೀಡಲಾಗುತ್ತಿದೆ?