ಎಂಸಿಎ ಅಧ್ಯಕ್ಷ ಸ್ಥಾನಕ್ಕೆ ಪವಾರ್ ವಾಪಸ್
ಕೇಂದ್ರ ಕೃಷಿ ಸಚಿವ ಹಾಗು ಎನ್‌ಸಿಪಿ ನೇತಾರ ಶರದ್‌ಪವಾರ್ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಅಧ್ಯಕ್ಷ ಸ್ಥಾನಕ್ಕೆ...
ಮುಂಬೈ: ಕೇಂದ್ರ ಕೃಷಿ ಸಚಿವ ಹಾಗು ಎನ್‌ಸಿಪಿ ನೇತಾರ ಶರದ್‌ಪವಾರ್ ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಅಧ್ಯಕ್ಷ ಸ್ಥಾನಕ್ಕೆ ಮರಳುವ ಸಾಧ್ಯತೆ ಬಹುತೇಕ ಖಚಿತವಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ನೇತಾರ ಗೋಪಿನಾಥ್ ಮುಂಡೆ ಸಲ್ಲಿಸಿದ ಅರ್ಜಿ ತಿರಸ್ಕೃತಗೊಂಡ ಕಾರಣ ಪವಾರ್ ಮತ್ತೆ ಅಧ್ಯಕ್ಷೆ ಸ್ಥಾನಕ್ಕೆ ಹಿಂದಿರುಗುವ ಹಾದಿ ಸುಗಮವಾಗಿದೆ.
ಪಾರ್ಸಿ ಪಯೋನೀರ್ ಕ್ರಿಕೆಟ್ ಕ್ಲಬ್ ಪ್ರತಿನಿಧೀಕರಿಸಿ ಪವಾರ್ ಅರ್ಜಿ ಸಲ್ಲಿಸಿದ್ದು, ಡಾ ಪಿ.ವಿ ಶೆಟ್ಟಿ ಪವಾರ್ ಹೆಸರು ಪ್ರಸ್ತಾಪಿಸಿ ಬೆಂಬಲಿಸಿದ್ದರು.
ಎಂಸಿಎ ಚುನಾವಣೆಯಲ್ಲಿ ಮುಂಡೆ ಅವರ ಅರ್ಜಿ ತಳ್ಳಿ ಹಾಕಲಾಗಿದೆ ಎಂದು ಎಂಸಿಎ ಅಧ್ಯಕ್ಷ ರವಿ ಸಾವಂತ್ ಗುರುವಾರ ಹೇಳಿಕೆ ನೀಡಿದ್ದಾರೆ.
2011ರಲ್ಲಿ ಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಪವಾರ್ 2005-06 ರಿಂದ 2007-08ರ ಅವಧಿಯಲ್ಲಿ ಬಿಸಿಸಿಐ ಉನ್ನತ ಹುದ್ದೆಯನ್ನಲಂಕರಿಸಿದ್ದರು.
ಮುಂಡೆ ಅವರ ಅರ್ಜಿ ತಿರಸ್ಕೃತಗೊಂಡ ಕಾರಣ ಪವಾರ್ ಇದೀಗ ಎಂಸಿಎ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.