ಕಲ್ಲಿದ್ದಲು ಪ್ರಕರಣದಲ್ಲಿ ಸುಪ್ರೀಂ ನಿರ್ದೇಶನವನ್ನು ಪಾಲಿಸುತ್ತಿದ್ದೇವೆ : ಸಿಬಿಐ
ಕಲ್ಲಿದ್ದಲು ಘಟಕ ಹಂಚಿಕೆ ಪ್ರಕರಣದಲ್ಲಿ ಆದಿತ್ಯ ಬಿರ್ಲಾ ಗ್ರೂಪ್ ಚೇರ್ಮೆನ್ ಕುಮಾರ್ ಮಂಗಲಂ ಬಿರ್ಲಾ ಮತ್ತು ಹಿಂಡಾಲ್ಕೋ ...
ನವದೆಹಲಿ: ಕಲ್ಲಿದ್ದಲು ಘಟಕ ಹಂಚಿಕೆ ಪ್ರಕರಣದಲ್ಲಿ ಆದಿತ್ಯ ಬಿರ್ಲಾ ಗ್ರೂಪ್ ಚೇರ್ಮೆನ್ ಕುಮಾರ್ ಮಂಗಲಂ ಬಿರ್ಲಾ ಮತ್ತು ಹಿಂಡಾಲ್ಕೋ ವಿರುದ್ಧ ಎಫ್ಐಆರ್ ದಾಖಲಿಸಿದ್ದಕ್ಕಾಗಿ ಸಿಬಿಐನ್ನು ಟೀಕಿಸುವವರಿಗೆ ಸಿಬಿಐ ಪ್ರತ್ಯುತ್ತರ ನೀಡಿದೆ.
ಪ್ರಸ್ತುತ ಹಗರಣದ ತನಿಖೆ ವಿಷಯದಲ್ಲಿ ತಾವು ಸುಪ್ರೀಂ ಕೋರ್ಟ್ನ ನಿರ್ದೇಶನವನ್ನು ಅನುಸರಿಸುತ್ತಿದ್ದೇವೆ ಎಂದು ಸಿಬಿಐ ಗುರುವಾರ ಹೇಳಿದೆ.
ಕಲ್ಲಿದ್ದಲು ಇಲಾಖೆ ಮಾಜಿ ಕಾರ್ಯದರ್ಶಿ ಪಿ.ಸಿ ಪರಾಖ್ ಅವರ ಬಗ್ಗೆ ಇನ್ನಿತರ ಸಂಸ್ಥೆಗಳು ಏನು ಹೇಳಿವೆ ಎಂಬುದು ನಮಗೆ ಅಗತ್ಯವಿಲ್ಲ. ಬಿರ್ಲಾ ಅವರಿಗೆ ಕಲ್ಲಿದ್ದಲು ಘಟಕ ಹಂಚಿರುವುದರ ಬಗ್ಗೆ ಹಾಗು ಸ್ಕ್ರೀನಿಂಗ್ ಕಮಿಟಿ ನಿರ್ಧಾರವನ್ನು ಪರಾಖ್ ಬದಲಿಸಿದ್ದಾರೆ ಎಂಬುದಕ್ಕೆ ನಮ್ಮಲ್ಲಿ ಸಾಕ್ಷ್ಯಗಳಿವೆ. ಇದು ಸುಪ್ರೀಂ ಕೋರ್ಟ್ ನಿರ್ದೇಶಿತ ತನಿಖೆ ಮತ್ತು ನಾವು ಅದರ ನಿಯಮಾನುಸಾರ ಕಾರ್ಯವೆಸಗುತ್ತಿದ್ದೇವೆ ಎಂದು ಸಿಬಿಐ ನಿರ್ದೇಶಕ ರಂಜಿತ್ ಸಿನ್ಹಾ ಹೇಳಿದ್ದಾರೆ.
ಏತನ್ಮಧ್ಯೆ, ಇದು ತನಿಖೆಯ ಪ್ರಥಮ ಹಂತವಾಗಿದ್ದು, ಆರೋಪಿಗಳಿಗೆ ತಮ್ಮ ತಮ್ಮ ವಾದಗಳನ್ನು ಸಲ್ಲಿಸುವ ಅವಕಾಶವನ್ನು ಇಲ್ಲಿ ನೀಡಲಾಗುವುದು ಎಂದು ಸಿಬಿಐ ಮುಖ್ಯಸ್ಥ ಹೇಳಿದ್ದಾರೆ.