467 ಅಂಕ ಏರಿಕೆ ಕಂಡ ಸಂವೇದಿ ಸೂಚ್ಯಂಕ
ಮುಂಬೈ ಷೇರುಮಾರುಕಟ್ಟೆ ಸಂವೇದಿ ಸೂಚ್ಯಂಕ ಶುಕ್ರವಾರ 467 ಅಂಕ ಏರಿಕೆಯಾಗುವ ಮೂಲಕ ಚೇತರಿಕೆ ಕಂಡುಕೊಂಡಿದೆ...
ಮುಂಬೈ: ಮುಂಬೈ ಷೇರುಮಾರುಕಟ್ಟೆ ಸಂವೇದಿ ಸೂಚ್ಯಂಕ ಶುಕ್ರವಾರ 467 ಅಂಕ ಏರಿಕೆಯಾಗುವ ಮೂಲಕ ಚೇತರಿಕೆ ಕಂಡುಕೊಂಡಿದೆ. ದಿನಾರಂಭದಲ್ಲಿ
ಉತ್ತಮ ಆರಂಭವನ್ನು ಕಂಡುಕೊಂಡ ಸೂಚ್ಯಂಕ ದಿನಾಂತ್ಯಕ್ಕೆ 467 ಅಂಕ ಜಿಗಿತ ಕಂಡು ವಹಿವಾಟುದಾರರಿಗೆ ಸಂತಸ ಮೂಡಿಸಿದೆ.
ಅಮೆರಿಕದ ಆರ್ಥಿಕತೆ ಚೇತರಿಕೆಗಾಗಿ ಫೆಡರಲ್ ರಿಸರ್ವ್ ಬ್ಯಾಂಕ್ ಮತ್ತಷ್ಟು ಹಣಕಾಸಿನ ನೆರವು ನೀಡಲಿದೆ ಎನ್ನುವ ವರದಿಯೇ ದೇಶೀಯ ಷೇರು ಮಾರುಕಟ್ಟೆಯಲ್ಲಿ ಚೇತರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಸೂಚ್ಯಂಕ ಏರಿಕೆ ಕಂಡ ಹಿನ್ನೆಲೆಯಲ್ಲಿ ಬ್ಯಾಂಕಿಂಗ್, ಉಕ್ಕು ಮತ್ತು ತೈಲ ಷೇರುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿದ್ದಾರೆ ಎಂದು ಮಾರುಕಟ್ಟೆಯ ಮೂಲಗಳು ಹೇಳಿವೆ.
ದಿನಾಂತ್ಯದಲ್ಲಿ ಮುಂಬೈ ಷೇರು ಮಾರುಕಟ್ಟೆ 467.38 ಅಂಕ ಗಳಿಸಿದ್ದು, ಇದು ಕಳೆದ ಮೂರು ವರ್ಷಗಳಲ್ಲಿ ಗಳಿಸಿದ ಅತೀ ಹೆಚ್ಚು ಅಂಕವಾಗಿದೆ.
ಅದೇ ವೇಳೆ ದೇಶೀಯ ಮಾರುಕಟ್ಟೆ ಸೂಚ್ಯಂಕವಾದ ನಿಫ್ಟಿಯಲ್ಲಿ 143.50 ಅಂಕಗಳ ಏರಿಕೆ ಕಂಡು ಬಂದಿದೆ.
ಐಸಿಐಸಿಐ ಬ್ಯಾಂಕ್, ಎಸ್ಎಸ್ಎಲ್ಟಿ, ಟಾಟಾ ಸ್ಟೀಲ್, ಎಚ್ಡಿಎಫ್ಸಿ ಬ್ಯಾಂತ್ ಮತ್ತು ಮಾರುತಿ ಸುಜುಕಿ ಷೇರುಗಳು ಭರ್ಜರಿ ವಹಿವಾಟು ನಡೆಸಿವೆ.