ಅಮೆರಿಕದ ಹಸ್ತಕ್ಷೇಪದಿಂದ ಕಾಶ್ಮೀರ ಸಮಸ್ಯೆಗೆ ಪರಿಹಾರ: ಶರೀಫ್
ಭಾರತ ಮತ್ತು ಪಾಕಿಸ್ತಾನ ನಡುವೆ ಇರುವ ಕಾಶ್ಮೀರ ಸಮಸ್ಯೆಗೆ ಅಮೆರಿಕ ಹಸ್ತಕ್ಷೇಪ ಮಾಡಿದರೆ ಎಲ್ಲವೂ ಪರಿಹಾರವಾಗ...
ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವೆ ಇರುವ ಕಾಶ್ಮೀರ ಸಮಸ್ಯೆಗೆ ಅಮೆರಿಕ ಹಸ್ತಕ್ಷೇಪ ಮಾಡಿದರೆ ಎಲ್ಲವೂ ಪರಿಹಾರವಾಗಬಲ್ಲುದು ಎಂದು ಪಾಕ್ ಪ್ರಧಾನಿ ನವಾಜ್ ಶರೀಫ್ ಅಭಿಪ್ರಾಯಪಟ್ಟಿದ್ದಾರೆ.
ವಾಷಿಂಗ್ಟನ್‌ಗೆ ಮೂರು ದಿನಗಳ ಕಾಲ ಅಧಿಕೃತ ಭೇಟಿ ನೀಡಿರುವ ಶರೀಫ್ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಭೇಟಿ ಮಾಡಿದ್ದಾರೆ.
1999 ಜುಲೈ ತಿಂಗಳಲ್ಲಿ ಅಮೆರಿಕಾಗೆ ಭೇಟಿ ನೀಡಿದಾಗ ಕಾರ್ಗಿಲ್ ಸಂಘರ್ಷ ನಡೆಯುತ್ತಿತ್ತು. ಆವಾಗ ನಾನು ಅಮೆರಿಕದ ಅಧ್ಯಕ್ಷ ಬಿಲ್ ಕ್ಲಿಂಟನ್ ಅವರಲ್ಲಿ ನೀವು ಕಾಶ್ಮೀರ ಸಮಸ್ಯೆಯ ಬಗ್ಗೆ ಹಸ್ತಕ್ಷೇಪ ಮಾಡಿದರೆ ಪ್ರಸ್ತುತ ಸಮಸ್ಯೆ ಪರಿಹಾರವಾಗಬಹುದು ಎಂದಿದ್ದೆ.
ನಿಮ್ಮ ಶೇ.10 ಸಮಯವನ್ನು ಮಧ್ಯ ಪೂರ್ವ ಮತ್ತು ಕಾಶ್ಮೀರ ಸಮಸ್ಯೆಗಳಿಗಾಗಿ ವ್ಯಯಿಸಿದರೆ ಭಾರತ ಮತ್ತು ಪಾಕ್ ನಡುವಿನ ಸಮಸ್ಯೆ ಪರಿಹಾರವಾಗುತ್ತದೆ ಎಂದು ತಾನು ಕ್ಲಿಂಟನ್ ಅವರಲ್ಲಿ ಹೇಳಿದ್ದೆ ಎಂದು ಶರೀಫ್ ನುಡಿದಿದ್ದಾರೆ.
ಆದಾಗ್ಯೂ, ಈ ಬಗ್ಗೆ ನಾನು ಮುತುವರ್ಜಿ ವಹಿಸುತ್ತೇನೆ ಎಂದು ಕ್ಲಿಂಟನ್ ಹೇಳಿದ್ದರೂ, ಆ ಹೊತ್ತಿಗೆ ಎಲ್ಲವೂ ಬದಲಾಗಿ ಹೋಯಿತು ಎಂದು ಶರೀಫ್ ಹೇಳಿದ್ದಾರೆ.
ಎರಡೂ ದೇಶಗಳ ನಡುವೆ ಸಮಸ್ಯೆ ಮತ್ತಷ್ಟು ಉಲ್ಬಣವಾಗಬಹುದು. ಭಾರತದಲ್ಲಿ ಅಣು ಬಾಂಬ್ ಇದೆ. ನಮ್ಮಲ್ಲೂ ಇದೆ. ಅವರು ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸುತ್ತಾರೆ, ನಾವೂ ಕೂಡಾ. ಇದೆಲ್ಲದಕ್ಕೂ ಒಂದು ಮಿತಿ ಇದೆ. ಈ ಬಗ್ಗೆ ನಾವು ಯೋಚಿಸಬೇಕಾಗಿದೆ ಎಂದು ಶರೀಫ್ ಹೇಳಿಕೆ ನೀಡಿದ್ದಾರೆ.