ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಅಸರಾಮ್ ಪುತ್ರನ ಬೆಂಬಲಿಗರಿಂದ ಡಿಸಿಪಿಗೆ ಪ್ರಾಣ ಬೆದರಿಕೆ

ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಅಸರಾಮ್ ಬಾಪು ಅವರ ಪುತ್ರ ನಾರಾಯಣ್ ಸಾಯಿ ಅವರನ್ನು ಹುಡುಕಲು ಯತ್ನಿಸಬೇಡಿ...

Mainashree
Updated On : 21 Oct 2013, 12:41 pm

ಸೂರತ್ : ಲೈಂಗಿಕ ದೌರ್ಜನ್ಯ ಆರೋಪ ಹೊತ್ತಿರುವ ಅಸರಾಮ್ ಬಾಪು ಅವರ ಪುತ್ರ ನಾರಾಯಣ್ ಸಾಯಿ ಅವರನ್ನು ಹುಡುಕಲು ಯತ್ನಿಸಬೇಡಿ ಎಂದು ಸೂರತ್ ಡಿಸಿಪಿಗೆ ಪ್ರಾಣ ಬೆದರಿಕೆ ಕರೆ ಬಂದಿದೆ ಎಂದು ಮೂಲಗಳು ತಿಳಿಸಿವೆ.

ಸೂರತ್‌ನ ಮಹಿಳಾ ಡಿಸಿಪಿಯಾದ ಶೋಭಾ ಭೂತಡಾ ಅವರಿಗೆ ನಾರಾಯಣ ಸಾಯಿ ಬೆಂಬಲಿಗರು, ಸಾಯಿ ಅವರನ್ನು ಹುಡಕಬೇಡಿ, ಅವರನ್ನು ಹುಡುಕಲು ಪ್ರಯತ್ನಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

ದುರವಾಣಿ ಕರೆ ಮಾಡಿದ ನಾರಾಯಣ ಸಾಯಿ ಬೆಂಬಲಿಗರು, ಪ್ರಕರಣ ಸಂಬಂಧ ಅವರನ್ನು ಹುಡುಕಿ ಬಂಧಿಸಬೇಡಿ. ನೀವು ಹಾಗೆ ಮಾಡಿದರೆ ಗುಂಡಿಕ್ಕಿ ಹತ್ಯೆಗೈಯ್ಯಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ ಎಂದು ಡಿಸಿಪಿ ಶೋಭಾ ತಿಳಿಸಿದ್ದಾರೆ.

ಕರೆ ಬಂದ ದೂರವಾಣಿ ಸಂಖ್ಯೆ ಮಧ್ಯಪ್ರದೇಶದ ದಶರತ್ ಸಿಂಗ್ ಎಂಬುವವರದ್ದು, ಈ ಸಂಬಂಧ ತನಿಖೆ ಕೈಗೊಳ್ಳಲಾಗಿದೆ ಎಂದು ಇನ್ಸ್‌ಪೆಕ್ಟರ್ ಸಿ.ಕೆ ಪಟೇಲ್ ಹೇಳಿದ್ದಾರೆ. ಶೋಭಾ ಅವರು ಉಮ್ರಾ ಪೊಲೀಸ್ ಠಾಣೆಯಲ್ಲಿ ಪ್ರರಕರಣ ದಾಖಲಿಸಿದ್ದಾರೆ.

ಲೈಂಗಿಕ ದೌರ್ಜನ್ಯ ಆರೋಪದಡಿ ಧಾರ್ಮಿಕ ಗುರು ಅಸರಾಮ್ ಬಾಪು ಮತ್ತು ಅವರ ಪುತ್ರ ನಾರಾಯಣ ಸಾಯಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈಗಾಗಲೇ ಅಸರಾಮ್ ಅವರನ್ನು ಬಂಧಿಸಲಾಗಿದ್ದು, ನಾರಾಯಣ್ ಸಾಯಿ ತಲೆಮರೆಸಿಕೊಂಡಿದ್ದಾನೆ. ಆರೋಪಿ ಹುಡುಕಾಟ ನಡೆಸುತ್ತಿರುವ ಡಿಸಿಪಿಗೆ ಬೆದರಿಕೆ ಕರೆ ಬಂದಿದೆ.

ಇದಲ್ಲದೇ ಸಾಯಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಇಂದು ಸೂರತ್ ನ್ಯಾಯಾಲಯದಲ್ಲಿ ನಡೆಯಲಿದ್ದು, ಅಸರಾಮ್ ಬಾಪು ಅವರ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.

ಜೋಧ್‌ಪುರದಲ್ಲಿ ಅಸಾರಾಮ್ ಟ್ರಸ್ಟ್ ನಡೆಸುತ್ತಿರುವ ಹಾಸ್ಟೆಲ್‌ನಲ್ಲಿರುವ 15 ವರ್ಷದ ಬಾಲಕಿಯೊಬ್ಬಳು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಧಾರ್ಮಿಕ ಗುರು ಅಸಾರಾಮ್ ಬಾಪು ವಿರುದ್ಧ ದೆಹಲಿ ಪೊಲೀಸರಿಗೆ ದೂರು ನೀಡಿದ್ದಳು. ರಾಜಸ್ಥಾನದಲ್ಲಿ ಜೀವ ಭಯವಿದ್ದುದ್ದರಿಂದ ಇಲ್ಲಿಗೆ ಬರಬೇಕಾಯಿತು ಎಂದು ಆಕೆಯ ತಂದೆ ಹೇಳಿದ್ದರು. ದೂರು ದಾಖಲಿಸಿಕೊಂಡಿದ್ದ ದೆಹಲಿ ಪೊಲೀಸರು ಪ್ರಕರಣವನ್ನು ರಾಜಸ್ಥಾನಕ್ಕೆ ವರ್ಗಾಯಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement