ನನ್ನ, ಈಶ್ವರಪ್ಪ ಬಗ್ಗೆ ಹಗುರವಾಗಿ ಮಾತನಾಡಬೇಡಿ: ಬಿಎಸ್ವೈ
ನನ್ನ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಹಗುರವಾಗಿ ಮಾತನಾಡಬೇಡಿ ಎಂದು ಮಾಜಿ..
ಶಿವಮೊಗ್ಗ: ನನ್ನ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ ವಿರುದ್ಧ ಹಗುರವಾಗಿ ಮಾತನಾಡಬೇಡಿ ಎಂದು ಮಾಜಿ ಮುಖ್ಯಮಂತ್ರಿ, ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೋಮವಾರ ಎಚ್ಚರಿಕೆ ನೀಡಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಸಿಎಂ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಯಡಿಯೂರಪ್ಪ, ನಾನು ಲೂಟಿ ಹೊಡೆದಿರುವುದಾಗಿ ಹೇಳಿದ್ದಿಯಾ, ನನ್ನ ಹಾಗೂ ನನ್ನ ಕುಟುಂಬದ ವಿರುದ್ಧ ತನಿಖೆ ನಡೆಸು, ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿ ಆಗುತ್ತೇನೆ ಎಂದು ಸವಾಲು ಹಾಕಿದರು.
ಕಳೆದ ಆರು ತಿಂಗಳಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೇ, ವ್ಯವಹಾರ ಮಾಡುತ್ತಿದ್ದೀರಿ, ವರ್ಗಾವಣೆ ದಂಧೆ ಮಾಡುತ್ತ ರಾಜ್ಯವನ್ನು ಲೂಟಿ ಮಾಡುತ್ತೀರಿ ಎಂದು ಆರೋಪಿಸಿದರು.
ಇದೇ ವೇಳೆ ಸಿಎಂ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಬಿಎಸ್ವೈ, ನೀನು ಅಹಿಂದ ಹೆಸರಿನಲ್ಲಿ ನಾಟಕ ಮಾಡುತ್ತಿದ್ದೀಯಾ ಎಂದು ಕಿಡಿಕಾರಿದರು.
ನನ್ನ ತಪ್ಪಿನಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆದರೆ ಈ ಬಾರಿ ಆ ತಪ್ಪು ಮಾಡದೆ ಮುಂದಿನ ಚುನಾವಣೆಯಲ್ಲಿ ಎಲ್ಲರೂ ಒಂದಾಗುತ್ತೇವೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮೂರು ಸ್ಥಾನ ಬರದಂತೆ ಮಾಡುತ್ತೇವೆ. ಹಾಗ ನೀವು ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ ಎಂದು ಬಿಎಸ್ವೈ ಎಚ್ಚರಿಸಿದ್ದಾರೆ.
ಸಿಎಂಗೆ ಶಿವಮೊಗ್ಗ ಅಭಿವೃದ್ಧಿ ಸಹಿಸಲಾಗುತ್ತಿಲ್ಲ ಮತ್ತು ಶಿವಮೊಗ್ಗ ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ನಾನು ಸಿಎಂ ಆದ ಬಳಿಕ ಶಿವಮೊಗ್ಗ ಸಾಕಷ್ಟು ಅಭಿವೃದ್ಧಿಯಾಗಿದೆ. ಹಿಂದೆ ಶಿವಮೊಗ್ಗ ಹೇಗಿತ್ತು ಎಂಬುದನ್ನು ಯೋಚಿಸಿ ಎಂದರು. ಅಲ್ಲದೆ ಮೈಸೂರಿನಲ್ಲಿ ನೀವು ಏನು ಕಡಿದು ಕಟ್ಟೆ ಹಾಕಿದ್ದೀರಾ? ಎಂದು ಪ್ರಶ್ನಿಸಿದರು.
ನಿನ್ನೆ ಯಡಿಯೂರಪ್ಪ ಹಾಗೂ ಈಶ್ವರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿಎಂ, ಈ ಹಿಂದೆ ಶಿವಮೊಗ್ಗ ಜೆಲ್ಲೆಯವರೇ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಇದ್ದರೂ, ಯಾವುದೇ ಅಭಿವೃದ್ಧಿಯಾಗಿಲ್ಲ ಎಂಬುದು ಇಲ್ಲಿ ನೋಡಿದಾಗ ತಿಳಿಯುತ್ತದೆ ಎಂದಿದ್ದರು. ಇದಕ್ಕೆ ಇಂದು ಪ್ರತಿಕ್ರಿಯಿಸಿದ್ದ ಯಡಿಯೂರಪ್ಪ ಸಿಎಂಗೆ ಕಣ್ಣು, ಕೀವಿ ಇಲ್ಲ. ಶಾಲಾ ಮಕ್ಕಳಿಗೆ ಕೇಳಿದರು ಇಲ್ಲಿಯ ಅಭಿವೃದ್ಧಿ ಬಗ್ಗೆ ಹೇಳುತ್ತಾರೆ ಎಂದಿದ್ದರು.
ಮತ್ತೆ ಬಿಎಸ್ವೈಗೆ ತಿರುಗೇಟು ನೀಡಿದ ಸಿಎಂ ಸಿದ್ದರಾಮಯ್ಯ, ಅವರು ಕಣ್ಣು, ಕೀವಿ ಇದ್ದರೂ ಜೈಲಿಗೆ ಹೋಗಿದ್ದರು ಎಂದು ವ್ಯಂಗ್ಯವಾಡಿದ್ದರು.