ಪಾಕ್ ಸೈನಿಕರ ದಾಳಿಯ ಬಗ್ಗೆ ತನಿಖೆ ನಡೆಸಿ: ಒಮರ್
ಪಾಕಿಸ್ತಾನ ಪದೇಪದೆ ಕದನ ವಿರಾಮ ಉಲ್ಲಂಘಿಸಿ, ಅಪ್ರಚೋದಿತ ದಾಳಿ ನಡೆಸುತ್ತಿರುವ ಬಗ್ಗೆ ತನಿಖೆ ನಡೆಸಿ ಎಂದು ಕೇಂದ್ರ
ಶ್ರೀನಗರ: ಪಾಕಿಸ್ತಾನ ಪದೇಪದೆ ಕದನ ವಿರಾಮ ಉಲ್ಲಂಘಿಸಿ, ಅಪ್ರಚೋದಿತ ದಾಳಿ ನಡೆಸುತ್ತಿರುವ ಬಗ್ಗೆ ತನಿಖೆ ನಡೆಸಿ ಎಂದು ಕೇಂದ್ರ ಸರ್ಕಾರಕ್ಕೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಪಾಕ್ ಸೈನಿಕರು ಹಲುವು ಬಾರಿ ಗಡಿ ನಿಯಂತ್ರಣ ರೇಖೆ ದಾಟಿ ಭಾರತೀಯ ಸೈನಿಕರ ಮೇಲೆ ದಾಳಿ ಮಾಡುತ್ತಿದ್ದಾರೆ. ಇದು ಹೀಗೆ ಮುಂದುವರೆದರೆ ಅವರ ವಿರುದ್ಧ ಕೂಲಂಕಷವಾಗಿ ತನಿಖೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಒಮರ್ ಒತ್ತಾಯಿಸಿದ್ದಾರೆ.
ಪಾಕ್ ಸೈನಿಕರ ಹಿಂದೆ ಪಾಕ್ ಪ್ರಧಾನಿ ನವಾಜ್ ಷರೀಫ್ ಕೈವಾಡವಿದೆಯೇ ಅಥವಾ ಅವರಿಗೆ ಗಡಿಯಲ್ಲಿ ಉದ್ರಿಕ್ತ ಪರಿಸ್ಥಿತಿ ನಿಯಂತ್ರಿಸಲಾಗುತ್ತಿಲ್ಲೋ ಎಂಬ ಅನುಮಾನ ಮೂಡಿದೆ. ಈ ಸಂಬಂಧ ಕೂಲಂಕಷವಾಗಿ ವಿಚಾರಣೆ ಮಾಡಿ ಎಂದು ಒಮರ್ ತಿಳಿಸಿದ್ದಾರೆ.
ಕಾಶ್ಮೀರ ವಿವಾದ ಬಗೆಹರಿಸಲು ಅಮೆರಿಕದ ಮಧ್ಯಸ್ಥಿಕೆ ಬೇಕು ಎಂದು ನವಾಜ್ ಷರೀಫ್ ಅವರು ಹೇಳಿದ ಬೆನ್ನಲ್ಲೇ ಪಾಕ್ ಸೈನಿಕರು ಅಂತಾರಾಷ್ಟ್ರೀಯ ಗಡಿಯಲ್ಲಿ ನಿನ್ನೆ ಒಂದೇ ದಿನ 10 ಬಾರಿ ಕದನ ವಿರಾಮ ಉಲ್ಲಂಘಿಸಿದ್ದಾರೆ. ನಿನ್ನೆ ರಾತ್ರಿ 8.30ರಿಂದ ಪಾಕ್ ಪಡೆ ಮತ್ತು ಭಾರತೀಯ ಯೋಧರ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದೆ. ಆದರೆ ಭಾರತೀಯರ ಸೇನಿಕರ ಕಡೆಯಲ್ಲಿ ಯೂವುದೇ ರೀತಿ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.