ಬಿಹಾರ ಬಿಸಿಯೂಟ ದುರಂತ: ಚಾರ್ಜ್‌ಶೀಟ್ ದಾಖಲು
23 ವಿದ್ಯಾರ್ಥಿಗಳನ್ನು ಬಲಿ ಪಡೆದ ಬಿಹಾರ ಮಧ್ಯಾಹ್ನದ ಬಿಸಿಯೂಟ ಪ್ರಕರಣ ಸಂಬಂಧ ಶಾಲಾ ಪ್ರಾಚಾರ್ಯ..
ಪಾಟ್ನಾ: 23 ವಿದ್ಯಾರ್ಥಿಗಳನ್ನು ಬಲಿ ಪಡೆದ ಬಿಹಾರ ಮಧ್ಯಾಹ್ನದ ಬಿಸಿಯೂಟ ಪ್ರಕರಣ ಸಂಬಂಧ ಶಾಲಾ ಪ್ರಾಚಾರ್ಯ ಹಾಗೂ ಆಕೆಯ ಪತಿಯ ವಿರುದ್ಧ ಪೊಲೀಸರು ಸೋಮವಾರ ಚಾರ್ಜ್‌ಶೀಟ್ ದಾಖಲಿಸಿದ್ದಾರೆ.
ಸರಣ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲಾ ಪ್ರಾಚಾರ್ಯ ಮೀನಾ ದೇವಿ ಹಾಗೂ ಆಕೆಯ ಪತಿ ಅರ್ಜುನ್ ರೈ ಅವರ ವಿರುದ್ಧ 346 ಪುಟಗಳ ದೋಷಾರೋಪ ಪಟ್ಟಿ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ರಾಜ್ ಕೌಶಲ್ ಅವರು ಹೇಳಿದ್ದಾರೆ. ಸದ್ಯ ಮೀನಾ ಮತ್ತು ಅರ್ಜುನ್ ರೈ ಇಬ್ಬರೂ ಜೈಲಿನಲ್ಲಿದ್ದಾರೆ.
ಐಪಿಸಿ ಸೆಕ್ಸೆನ್ 302(ಹತ್ಯೆ) ಮತ್ತು ಸೆಕ್ಸೆನ್ 307(ಹತ್ಯೆಗೆ ಯತ್ನ) ಸೇರಿದಂತೆ ಹಲವು ಸೆಕ್ಸೆನ್‌ಗಳಡಿ ಇಬ್ಬರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ತನಿಖಾ ಅಧಿಕಾರಿಯೂ ಆಗಿರುವ ಕೌಶಲ್ ಅವರು ತಿಳಿಸಿದ್ದಾರೆ.
ರೈ ಅವರು ಸಕ್ಕರೆ ಕಾರ್ಖಾನೆಯಿಂದ ಖರೀದಿಸಿದ್ದ ಕೀಟನಾಶಕವನ್ನು ಮಧ್ಯಾಹ್ನ ಬಿಸಿ ಊಟ ಸಂಗ್ರಹಿಸುವ ಕೋಣೆಯಲ್ಲೇ ಇಟ್ಟಿದ್ದರು. ಹೀಗಾಗಿ ಕೀಟನಾಶಕದೊಂದಿಗೆ ಆಹಾರ ತಯಾರಿಸಲಾಗಿದೆ ಎಂದು ಕೌಶಲ್ ಅವರು ಹೇಳಿದ್ದಾರೆ.
ಈ ಸಂಬಂಧ ಇಬ್ಬರ ಆರೋಪಿಗಳ ವಿರುದ್ಧ ಬೇಕಾದ ಅಗತ್ಯ ಸಾಕ್ಷ್ಯಾಧಾರಗಳನ್ನು ತನಿಖೆಯ ವೇಳೆ ಸಂಗ್ರಹಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜುಲೈ 16ರಂದು ಛಪ್ರಾದ ಧರ್ಮಸ್ತಿ ಗಂಡಮಾನ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿ 23 ವಿದ್ಯಾರ್ಥಿಗಳು ಮೃತಪಟ್ಟಿದ್ದರು. ದುರಂತಕ್ಕೆ ಅಡುಗೆ ಎಣ್ಣೆಯಲ್ಲಿನ ಮೋನೋಕ್ರೊಟೋಫಾಸ್ ಎಂಬ ಕೀಟನಾಶಕವೇ ಕಾರಣ ಎಂದು ವಿಧಿವಿಜ್ಞಾನ ಪ್ರಯೋಗಾಲದ ವರದಿ ಹೇಳಿದೆ.