ಸಾಧು ಶೋಭನ್ ಸರ್ಕಾರ್ ಕ್ಷಮೆಯಾಚಿಸಿದ ಮೋದಿ
ಸಾಧು ಶೋಭನ್ ಸರ್ಕಾರ್ ಅವರ ಕನಸಿನ ಆಧಾರದ ಮೇಲೆ ಕೇಂದ್ರ ಸರ್ಕಾರ ಉತ್ಖನನ ಕಾರ್ಯಕ್ಕೆ ಮುಂದಾಗಿರುವುದು...
ಅಹಮದಾಬಾದ್: ಸಾಧು ಶೋಭನ್ ಸರ್ಕಾರ್ ಅವರ ಕನಸಿನ ಆಧಾರದ ಮೇಲೆ ಕೇಂದ್ರ ಸರ್ಕಾರ ಉತ್ಖನನ ಕಾರ್ಯಕ್ಕೆ ಮುಂದಾಗಿರುವುದು ನಗೆ ತರಿಸುತ್ತಿದೆ ಎಂದು ಲೇವಡಿ ಮಾಡಿದ,್ದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸೋಮವಾರ ಯೂ-ಟರ್ನ್ ಹೊಡೆದಿದ್ದು, ಸಾಧು ಶೋಭನ್ ಒಬ್ಬ ಮಹಾನ್ ಸಾಧಕ ಎಂದು ಹೋಗಳಿದ್ದಾರೆ.
ಹಲವು ವರ್ಷಗಳಿಂದ ತಮ್ಮ ದಿವ್ಯದೃಷ್ಠಿಯಿಂದ ಶೋಭನ್ ಸರ್ಕಾರ್ ಅವರು ಲಕ್ಷಾಂತರ ಮಂದಿಗೆ ಒಳ್ಳೆಯದನ್ನು ಮಾಡುತ್ತಾ ಬಂದಿದ್ದಾರೆ. ಹೀಗಾಗಿ ಅವರು ಒಬ್ಬ ಮಹಾನ್ ಸಾಧಕ. ಅವರ ಮೇಲೆ ನನಗೆ ಅಪಾರ ಗೌರವವಿದೆ. ಸಾಧು ಅವರ ವಿರುದ್ಧ ನಾನು ಮಾತನಾಡಿಲ್ಲ. ಅವರ ಮನಸ್ಸಿಗೆ ನೋವನ್ನುಂಟು ಮಾಡುವ ಉದ್ದೇಶವಿರಲಿಲ್ಲ. ಹಾಗೂ ಅವರ ಮನಸ್ಸಿಗೆ ನೋವಾಗಿದ್ದರೆ ನಾನು ಕ್ಷಮೆ ಕೇಳುತ್ತೇನೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಶೋಭನ್ ಸರ್ಕಾರ್ ಅವರ ಕನಸಿನಲ್ಲಿ ರಾಜನೊರ್ವ ಬಂದು ಉತ್ತರಪ್ರದೇಶದ ಉನ್ನಾವ್ ಜಿಲ್ಲೆಯ ಕೋಟೆಯಲ್ಲಿ 1 ಸಾವಿರ ಟನ್ ಚಿನ್ನ ಹುದುಗಿಸಿಟ್ಟಿರುವುದಾಗಿ ಹೇಳಿದ್ದು, ಶೋಭನ್ ಅವರ ಹೇಳಿಕೆಯನ್ನು ನಂಬಿಕೊಂಡು ಪುರಾತತ್ವ ಇಲಾಖೆ ಉತ್ಖನನಕ್ಕೆ ಮುಂದಾಗಿದೆ. ಇದೊಂದು ನಗೆ ತರಿಸುವ ಸಂಗತಿಯಾಗಿದ್ದು. ಪ್ರಪಂಚವೇ ನಮ್ಮನ್ನು ತಮಾಷೆ ಮಾಡುತ್ತಿದೆ. ಉತ್ಖನನಕ್ಕೆ ಬದಲಾಗಿ ಸ್ವೀಸ್ಬ್ಯಾಂಕ್ನಲ್ಲಿ ಇಟ್ಟಿರುವ ಕಪ್ಪುಹಣವನ್ನು ಕೇಂದ್ರ ಸರ್ಕಾರ ವಾಪಸ್ ಭಾರತಕ್ಕೆ ತಂದರೆ ಅದೇ ಸಾಕು ಎಂದು ಚೆನ್ನೈನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ವ್ಯಂಗ್ಯವಾಡಿದ್ದರು.
ಮೋದಿ ಹೇಳಿಕೆಗೆ ಇಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಶೋಭನ್ ಅವರು, ವೇದಿಕೆ ಮೇಲಿರುವವರನ್ನು ಮೆಚ್ಚಿಸಲು ಮೋದಿ ಅವರು ಈ ರೀತಿ ಹೇಳಿದ್ದಾರೆ. ನನ್ನು ಕನಸಿನ ಮೇಲೆ ಮೋದಿಗೆ ಅಪನಂಬಿಕೆ ಇದ್ದರೆ ಬಹಿರಂಗವಾಗಿ ಚರ್ಚಿಸಲು ನಾನು ಸಿದ್ಧ ಎಂದು ಸವಾಲು ಹಾಕಿದ್ದರು.
ಇದೇ ವೇಳೆ, ಮೋದಿ ಅವರ ಹೇಳಿಕೆಯಿಂದ ಸಂತರ ಘನತೆಗೆ ಧಕ್ಕೆಯುಂಟಾಗಿದೆ ಎಂದು ಶೋಭನ್ ಸರ್ಕಾರ್ ಆರೋಪಿಸಿದ್ದು, ಈ ಸಂಬಂಧ ಮೋದಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ 'ಒಂದು ಪಕ್ಷ ನೀವು ಪ್ರಧಾನಿಯಾದರೆ ಈ ರೀತಿಯ ಟನ್ ಗಟ್ಟಲೆ ಬಂಗಾರ ಇರುವ ಬಗ್ಗೆ ಮಾಹಿತಿ ಕೊಟ್ಟರೆ ಉತ್ಖನನ ನಡೆಸುತ್ತೀರೋ ಅಥವಾ ಲೇವಡಿ ಮಾಡುತ್ತೀರೋ' ಎಂದು ಪ್ರಶ್ನಿಸಿದ್ದಾರೆ. ಸರ್ಕಾರ್ ಅವರ ಪ್ರತಿಕ್ರಿಯೆ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದಂತೆ ಟ್ವೀಟ್ ಮಾಡಿರುವ ಮೋದಿ, ಶೋಭನ್ ಸರ್ಕಾರ್ ಅವರ ಕ್ಷಮೆಯಾಚಿಸಿದ್ದಾರೆ.