ಕೂಡುಂಕುಳಂ ಅಣು ಸ್ಥಾವರ ಕಾರ್ಯಾರಂಭ
ತಮಿಳುನಾಡಿನ ತಿರುನಲ್ವೇಲಿ ಸಮೀಪದ ಕೂಡಂಕುಳಂ ಅಣು ವಿದ್ಯುತ್ ಸ್ಧಾವರ ಮಂಗಳವಾರ ಕಾರ್ಯಾರಂಭ ಮಾಡಿದ್ದು...
ಚೆನ್ನೈ: ತಮಿಳುನಾಡಿನ ತಿರುನಲ್ವೇಲಿ ಸಮೀಪದ ಕೂಡಂಕುಳಂ ಅಣು ವಿದ್ಯುತ್ ಸ್ಧಾವರ ಮಂಗಳವಾರ ಕಾರ್ಯಾರಂಭ ಮಾಡಿದ್ದು, ಕಾರ್ಯಾರಂಭಗೊಂಡಿರುವ 1ನೇ ಜನರೇಟರ್ ಘಟಕದಿಂದ ಸುಮಾರು 160 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗಿದೆ.
ಇಂದು ಬೆಳಿಗ್ಗೆ ಸುಮಾರು 2.45ಕ್ಕೆ ಅಣು ವಿದ್ಯುತ್ ಸ್ಥಾವರ ಕಾರ್ಯಾರಂಭಗೊಳ್ಳುತ್ತಿದ್ದಂತೆ 1ನೇ ಘಟಕದ ಮೂಲಕ 160 ಮೆಗಾ ವ್ಯಾಟ್ ವಿದ್ಯುತ್ ತಯಾರಿಸಲಾಗಿದ್ದು, ಅದನ್ನು ದಕ್ಷಿಣ ವಿದ್ಯುತ್ ಗ್ರಿಡ್‌ಗೆ ಸಂಪರ್ಕ ಕಲ್ಪಿಸಲಾಗಿದೆ. ಜನರೇಟರ್ ಮತ್ತು ಇತರ ಪರೀಕ್ಷೆಗಳನ್ನು ನಡೆಸಿದ ನಂತರ ಇದರ ಸಾಮರ್ಥ್ಯವನ್ನು ಹೆಚ್ಚಿಸಲಾಗುವುದು ಎಂದು ಕೂಡಂಕುಳಂ ಅಣು ಸ್ಥಾವರ ಘಟಕದ(ಕೆಕೆಎನ್‌ಪಿಪಿ) ಮುಖ್ಯಸ್ಥ ಆರ್.ಎಸ್. ಸುಂದರ್ ಅವರು ತಿಳಿಸಿದ್ದಾರೆ.
ಈ ಘಟಕದ ಮೂಲಕ ಮುಂದಿನ ಎರಡು ಮೂರು ದಿನಗಳೊಳಗೆ 300 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲಾಗುವುದು ಎಂದರು. ಅಣು ವಿದ್ಯುತ್ ನಿಯಂತ್ರಣ ಮಂಡಳಿ 500 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದಿಸಲು ಅನುಮತಿ ನೀಡಿದ್ದು, ಮತ್ತಷ್ಟು ಪರೀಕ್ಷೆಗಳನ್ನು ನಡೆಸಿದ ಬಳಿಕ ಹೆಚ್ಚಿನ ವಿದ್ಯುತ್ ಗ್ರಿಡಗ್ ಹರಿಸಲಾಗುವುದು ಎಂದು ತಿಳಿಸಿದ್ದಾರೆ.
1 ಸಾವಿರ ಮೆಗಾ ವ್ಯಾಟ್‌ನ ಎರಡು ಘಟಕಗಳಿಗೆ ಈಗಾಗಲೇ ಸಹಿ ಹಾಕಲಾಗಿದ್ದು, 1 ಸಾವಿರದ ಮತ್ತೆರಡು ಘಟಕಗಳ ಸ್ಧಾಪನೆ ಕುರಿತು ಮಾತುಕತೆ ಮುಂದುವರಿದಿದೆ. ಹಾಗೇನಾದರು ಆದಲ್ಲಿ ಅದು ಭಾರತದಲ್ಲೇ ಅತಿ ಹೆಚ್ಚು ಸಾಮರ್ಥ್ಯದ ಅಣು ವಿದ್ಯುತ್ ಸ್ಥಾವರವಾಗಲಿದೆ ಎಂದು ಸುಂದರ್ ತಿಳಿಸಿದ್ದಾರೆ.