ನನ್ನ ವಿರುದ್ಧ ಕಾಂಗ್ರೆಸ್ ಸಂಚು: ರಾಮ್‌ದೇವ್
ಹರಿದ್ವಾರ್: ಕಪ್ಪುಹಣ ಮತ್ತು ಕಾಂಗ್ರೆಸ್‌ನ ಹಗರಣಗಳ ವಿರುದ್ಧ ಮಾತನಾಡಿದ್ದಕ್ಕಾಗಿ ನನ್ನನ್ನು ಕ್ರಿಮಿನಲ್ ಎಂದು ತೋರಿಸಲು ಯುಪಿಎ ಸರ್ಕಾರ ಮುಂದಾಗಿದೆ ಎಂದು ಯೋಗ ಗುರು ಬಾಬಾ ರಾಮ್‌ದೇವ್ ಅವರು ಮಂಗಳವಾರ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಇಂದೋರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನ್ನನ್ನೊಬ್ಬ ಕ್ರಿಮಿನಲ್ ಎಂದು ಬಿಂಬಿಸಲು ಕಾಂಗ್ರೆಸ್ ಹವಣಿಸುತ್ತಿದೆ ಎಂದು ಆರೋಪಿಸಿದರು. ಕಪ್ಪುಹಣ ಮತ್ತು ಕಾಂಗ್ರೆಸ್‌ನ ಹಗರಣಗಳ ವಿರುದ್ಧ ನಾನು ಮಾತನಾಡಿದ್ದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಹೀಗೆ ಮಾಡುತ್ತಿದೆ ಎಂದು ಕಿಡಿಕಾರಿದರು. ಅಲ್ಲದೆ ಮುಂಬರುವ ವಿಧಾನಸಭೆ ಚುನಾವಣೆ ಮತ್ತು ಸಂಸತ್ ಚುನಾವಣೆಯಲ್ಲಿ ಸೋಲು ಅನುಭವಿಸುವ ಭೀತಿಯಿಂದ ನನ್ನ ಚಾರಿತ್ರ್ಯವಧೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕೆ ಉತ್ತರಪ್ರದೇಶ ಸರ್ಕಾರ ಸಹ ಕೈ ಜೋಡಿಸಿದೆ ಎಂದರು.
ಹರಿದ್ವಾರದ ಪತಂಜಲಿ ಯೋಗ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯನ್ನು ಬಾಬಾ ರಾಮ್‌ದೇವ್ ಸೋದರ ರಾಮ್ ಭರತ್ ಮತ್ತು ರಾಮ್‌ದೇವ್ ಆಪ್ತ ನರೇಶ್ ಮಲ್ಲಿಕ್ ಅಪಹರಿಸಿದ್ದಾರೆ ಎಂಬ ಪ್ರಕರಣವೊಂದನ್ನು ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ರಾಮ್‌ದೇವ್ ಇಂದು ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ. ಇದೇ ವೇಳೆ ಕಾಂಗ್ರೆಸ್ ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಗಾಂಧಿ ಕುಟುಂಬ ಒತ್ತೆಯಾಳಾಗಿ ಮಾಡಿಕೊಂಡಿದೆ ಎಂದು ದೂರಿದರು.
ಭಾರತ ಸ್ವಾತಂತ್ರ್ಯಾ ನಂತರ ಕಾಂಗ್ರೆಸ್ಸನ್ನು ವಿಸರ್ಜಿಸಬೇಕೆಂದು ಮಹಾತ್ಮ ಗಾಂಧಿ ಅವರ ಕನಸನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ಪೂರ್ಣಗೊಳಿಸಲಿದ್ದಾರೆ ಎಂದು ರಾಮ್ ದೇವ್ ತಿಳಿಸಿದರು. ರಾಹುಲ್‌ಗಿಂತ ಪ್ರಿಯಾಂಕಾ ಗಾಂಧಿ ಹೆಚ್ಚು ಜನಪ್ರಿಯರಾಗಿದ್ದಾರೆ. ಆದರೆ ಸೋನಿಯಾಗೆ ಮಗನ ಮೇಲೆ ಅತಿಯಾದ ಪ್ರೇಮವಿರುವುದರಿಂದ ಪ್ರಿಯಾಂಕರನ್ನು ಬಿಟ್ಟು ರಾಹುಲ್‌ರನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ ಎಂದರು.