ಬಡವರಿಗೆ ಕೈಗೆಟುಕುವ ಬೆಲೆಯಲ್ಲಿ ಮನೆಗಳ ನಿರ್ಮಾಣ: ಅಂಬರೀಷ್
ಬೆಳಗಾವಿ: ಸ್ಲಂಮುಕ್ತ ರಾಜ್ಯವನ್ನಾಗಿ ಮಾಡಲು ಸರ್ಕಾರ ಕಂಕಣ ಬದ್ಧವಾಗಿದ್ದು, ಬಡವರಿಗೆ ಕೈಗೆಟಕುವ ಬೆಲೆಯಲ್ಲಿ ಮನೆಗಳ ನಿರ್ಮಾಣ ಮಾಡಲಾಗುವುದು ಎಂದು ವಸತಿ ಸಚಿವ ಅಂಬರೀಷ್ ಹೇಳಿದ್ದಾರೆ.
ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರಿಗೆ ಕಡಿಮೆ ಬೆಲೆಯಲ್ಲಿ ಮನೆಗಳನ್ನು ನಿರ್ಮಿಸುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ರಾಜ್ಯದಲ್ಲಿ ಸ್ಲಂಮುಕ್ತ ಮಾಡಲು ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಸದ್ಯ ಬೆಳಗಾವಿಯನ್ನು ಸ್ಲಂಮುಕ್ತ ಮಾಡಲು ಮತ್ತು ಜನರಿಗೆ ಕಡಿಮೆ ದರದಲ್ಲಿ ಮನೆಗಳನ್ನು ಕಟ್ಟಿಸಿಕೊಡಲು ಕೇಂದ್ರ ಸರ್ಕಾರ ಸುಮಾರು 177 ಕೋಟಿ ರುಪಾಯಿ ಅನುದಾನವನ್ನು ಬಿಡುಗಡೆ ಮಾಡಿದೆ ಎಂದರು.
ಬೆಳಗಾವಿಯಲ್ಲಿ ಮೂರು ಹಂತಗಳಲ್ಲಿ ಮನೆಗಳನ್ನು ಕಟ್ಟಿಸುವ ಕಾರ್ಯ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದರು. ನಂತರ ಕಡಿಮೆ ಬೆಲೆಗಳಿಗೆ ಮನೆಗಳನ್ನು ಬಡವರಿಗೆ ಹಸ್ತಾಂತರಿಸಲಾಗುವುದು. ಮುಂದಿನ ದಿನಗಳಲ್ಲಿ ರಾಜ್ಯದ ಇನ್ನಿತರ ಜಿಲ್ಲೆಗಳಲ್ಲೂ ಮನೆಗಳನ್ನು ನಿರ್ಮಿಸುವ ಕಾರ್ಯವನ್ನು ಸರ್ಕಾರ ಕೈಗೊಳ್ಳಲಿದೆ ಎಂದರು.