ಲೋಕಸಭೆಯಿಂದ ಲಾಲು, ಶರ್ಮಾ ಔಟ್
ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಂಸದ, ಶಾಸಕರನ್ನು ತಕ್ಷಣದಿಂದಲೇ ಅನರ್ಹಗೊಳಿಸಬೇಕು ..
ನವದೆಹಲಿ: ಎರಡು ಅಥವಾ ಅದಕ್ಕಿಂತ ಹೆಚ್ಚು ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಂಸದ, ಶಾಸಕರನ್ನು ತಕ್ಷಣದಿಂದಲೇ ಅನರ್ಹಗೊಳಿಸಬೇಕು ಎಂಬ ಸುಪ್ರೀಂ ಕೋರ್ಟ್ ತೀರ್ಪಿಗೆ ಮಂಗಳವಾರ ಮತ್ತೆರಡು ವಿಕೆಟ್ ಬಿದ್ದಿವೆ.
ಮೇವು ಹಗರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಜೆಡಿಯು ಸಂಸದ ಜಗದೀಶ್ ಶರ್ಮಾ ಅವರು ತಮ್ಮ ಲೋಕಸಭಾ ಸದಸ್ಯತ್ವದಿಂದ ಇಂದು ಅಧಿಕೃತವಾಗಿ ಅನರ್ಹಗೊಂಡಿದ್ದಾರೆ.
ವೈದ್ಯಕೀಯ ಸೀಟು ಲಂಚ ಪ್ರಕರಣದಲ್ಲಿ ನಾಲ್ಕು ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ರಾಜ್ಯಸಭಾ ಸದಸ್ಯ ರಶೀದ್ ಮಸೂದ್ ನಿನ್ನೆಯಷ್ಟೇ ತಮ್ಮ ಸ್ಥಾನದಿಂದ ಅನರ್ಹಗೊಂಡಿದ್ದರು. ಇದರ ಬೆನ್ನಲ್ಲೇ ಲಾಲು ಹಾಗೂ ಜಗದೀಶ್ ಶರ್ಮಾ ಅವರೂ ತಮ್ಮ ಸಂಸದ ಸ್ಥಾನ ಕಳೆದುಕೊಂಡಿದ್ದಾರೆ.
ಕಳೆದ ಸೆಪ್ಟೆಂಬರ್ 30ರಂದು ಸಿಬಿಐ ಕೋರ್ಟ್ ಲಾಲು ಹಾಗೂ ಶರ್ಮಾ ಸೇರಿದಂತೆ 42 ಆರೋಪಿಗಳು ದೋಷಿಗಳೆಂದು ತೀರ್ಪು ನೀಡಿ, ಐದು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಸಿಬಿಐ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಲಾಲು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ ಜಾಮೀನು ಸಹ ಕೇಳಿದ್ದಾರೆ.
ಲಾಲು ಅವರು ಸದ್ಯ ರಾಂಚಿಯ ಬಿರ್ಸಾಮುಂಡಾ ಜೈಲಿನಲ್ಲಿದ್ದಾರೆ.
ಸುಪ್ರೀಂ ತೀರ್ಪು: ಜು.10ರಂದು ಸುಪ್ರೀಂ ನೀಡಿದ್ದ ತೀರ್ಪನ್ನು ಆಧರಿಸಿ ಮಸೂದ್, ಲಾಲು ಹಾಗೂ ಶರ್ಮಾರನ್ನು ಅನರ್ಹಗೊಳಿಸಲಾಗಿದೆ. ಶಿಕ್ಷೆಗೆ ಗುರಿಯಾಗಿರುವ ಸಂಸದ, ಶಾಸಕರ ಮೇಲ್ಮನವಿ ಇತ್ಯರ್ಥವಾಗುವವರೆಗೆ ಅನರ್ಹತೆಯಿಂದ ರಕ್ಷಣೆ ನೀಡುವ ಪ್ರಜಾಪ್ರಾತಿನಿಧ್ಯ ಕಾಯ್ದೆಯ ಕಲಂ 8ರ 4ನೇ ಉಪಕಲಂ ಅನ್ನು ಸುಪ್ರೀಂ ಕೋರ್ಟ್ ತೆಗೆದು ಹಾಕಿತ್ತು.